ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಹೊಸ ಆರ್ಥಿಕ ನೀತಿಗಳು ಹಾಗೂ ತೆರಿಗೆ ಪ್ರಸ್ತಾವನೆಗಳ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು “ಆಂಟಿಸಿಪೇಟರಿ ಟ್ಯಾಕ್ಸ್” (ಊಹಾತ್ಮಕ ಮುಂಗಡ ತೆರಿಗೆ) ಎಂದು ಕರೆದಿರುವ ಅವರು, ಇದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನ ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಶೋಕ್, ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಲಾಭ ಬರುವ ಮುನ್ನವೇ ತೆರಿಗೆಯ ಬರೆ?
ಹಳೆ ಮದ್ರಾಸ್ ರಸ್ತೆ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ₹1,300 ಕೋಟಿ ವೆಚ್ಚವಾಗುತ್ತಿದ್ದು, ಇದನ್ನು ಸರಿದೂಗಿಸಲು ಸರ್ಕಾರ ವಿಚಿತ್ರ ತರ್ಕ ಬಳಸುತ್ತಿದೆ ಎಂದು ಅಶೋಕ್ ದೂರಿದ್ದಾರೆ. “ರಸ್ತೆ ನಿರ್ಮಾಣವಾದ ಬಳಿಕ ಆಸ್ತಿ ಮೌಲ್ಯ ಮತ್ತು ವ್ಯಾಪಾರ ಹೆಚ್ಚಾಗಬಹುದು ಎಂಬ ಕಾರಣ ನೀಡಿ ಈಗಲೇ ಹೆಚ್ಚಿನ ತೆರಿಗೆ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಇನ್ನು ಆದಾಯವೇ ಬಾರದಿದ್ದರೂ, ಭವಿಷ್ಯದ ಊಹೆಯ ಮೇಲೆ ತೆರಿಗೆ ವಿಧಿಸುವುದು ಹಗಲು ದರೋಡೆಯಾಗಿದೆ” ಎಂದು ಅವರು ಜರೆದಿದ್ದಾರೆ.
ಮುಂದಿನ ದಿನಗಳಲ್ಲಿ ಹೊಸ ಹೊಸ ತೆರಿಗೆಗಳ ಭೀತಿ
ಸರ್ಕಾರದ ಈ ಹೊಸ ತರ್ಕವನ್ನು ಒಪ್ಪಿಕೊಂಡರೆ ಬೆಂಗಳೂರಿನ ನಾಗರಿಕರು ಭವಿಷ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ. ಇಂದು ಎಲಿವೇಟೆಡ್ ರಸ್ತೆಗೆ ತೆರಿಗೆ ವಿಧಿಸಿದರೆ, ನಾಳೆ ಮೆಟ್ರೋ ಬಂದಾಗ “ಮೆಟ್ರೋ ಪ್ರಾಕ್ಸಿಮಿಟಿ ಟ್ಯಾಕ್ಸ್”, ಫ್ಲೈಓವರ್ ಆದಾಗ “ಫ್ಲೈಓವರ್ ಟ್ಯಾಕ್ಸ್” ಹಾಗೂ ಬಸ್ ನಿಲ್ದಾಣ ಬಂದಾಗ “ಕನೆಕ್ಟಿವಿಟಿ ಟ್ಯಾಕ್ಸ್” ಹೆಸರಿನಲ್ಲಿ ಜನರ ಮೇಲೆ ನಿರಂತರವಾಗಿ ಹೊಸ ತೆರಿಗೆಗಳ ಬರೆ ಎಳೆಯಲಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಧ ಭಾಗಗಳ ನಾಗರಿಕರಿಗೆ ಎಚ್ಚರಿಕೆಯ ಸಂದೇಶ
ಇಂದಿರಾನಗರ, ಎಚ್‌ಎಎಲ್ ರಸ್ತೆ, ದೊಮ್ಮಲೂರು, ಮಡಿವಾಳ, ಹೊಸೂರು ರಸ್ತೆ ಹಾಗೂ ಸಿಎಂಎಚ್ ರಸ್ತೆ ಭಾಗದ ನಾಗರಿಕರು ಮತ್ತು ವ್ಯಾಪಾರಿಗಳು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿರುವ ಮಾಜಿ ಸಚಿವರು, ಒಂದೆಡೆ ಟೋಲ್ ಹೊರೆ ಹಾಗೂ ಇನ್ನೊಂದೆಡೆ ಈ ಹೊಸ ತೆರಿಗೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದಿದ್ದಾರೆ.
ಪ್ರಸ್ತಾವನೆ ಕೈಬಿಡಲು ಆಗ್ರಹ
“ಕ್ಯಾಮೆರಾ ಮುಂದೆ ಅಧಿಕಾರಿಗಳ ವಿರುದ್ಧ ಕೂಗಾಡುವ ಸಚಿವರು, ಈ ಆಂಟಿಸಿಪೇಟರಿ ಟ್ಯಾಕ್ಸ್ ಪ್ರಮಾಣ ಎಷ್ಟು ಮತ್ತು ಇದಕ್ಕೆ ಸಾರ್ವಜನಿಕರ ಒಪ್ಪಿಗೆ ಪಡೆಯಲಾಗಿದೆಯೇ ಎಂಬುದಕ್ಕೆ ಜನರ ಮುಂದೆ ಉತ್ತರಿಸಬೇಕು” ಎಂದು ಸವಾಲು ಹಾಕಿದ್ದಾರೆ. ತಕ್ಷಣವೇ ಸಾರ್ವಜನಿಕ ವಿರೋಧಿಯಾಗಿರುವ ಈ ತೆರಿಗೆ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

