ಬೆಂಗಳೂರು: ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಕುರಿತು ಪ್ರತಿಪಕ್ಷ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ಆಡಳಿತ ವೈಖರಿ ಮತ್ತು ಪಕ್ಷದೊಳಗಿನ ಭಿನ್ನಮತವನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ನಿರ್ಗಮನ: ಸಚಿವ ಸ್ಥಾನ ಸಿಗದ ಕಾರಣಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಡುವೆಯೇ ಅರ್ಧದಲ್ಲೇ ಎದ್ದು ಹೊರನಡೆದಿದ್ದಾರೆ.
ರಾಮಲಿಂಗಾರೆಡ್ಡಿ ರಾಜೀನಾಮೆ ಅಸ್ತ್ರ: ತಮಗೆ ಈ ಹಿಂದೆ ಭರವಸೆ ನೀಡಿದ್ದ ಖಾತೆಯನ್ನು ನೀಡದೆ ಹೈಕಮಾಂಡ್ ಮಾತು ತಪ್ಪಿದೆ ಎಂದು ಆರೋಪಿಸಿ, ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆ.ಎಚ್. ಮುನಿಯಪ್ಪ ಪಟ್ಟು: ತಮ್ಮ ಹಿರಿತನ ಹಾಗೂ ರಾಜಕೀಯ ಸಾಮರ್ಥ್ಯಕ್ಕೆ ತಕ್ಕ ಇಲಾಖೆಯನ್ನು ಹಂಚಿಕೆ ಮಾಡುವವರೆಗೂ, ತಮಗೆ ಈಗ ನೀಡಿರುವ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ಸಚಿವ ಕೆ.ಎಚ್. ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.
ಕನ್ನಡಿಗರಿಗೆ ಉಂಟಾಗಿರುವ ಸ್ಥಿತಿ
ಪಕ್ಷದೊಳಗೆ ಇಷ್ಟೆಲ್ಲಾ ಗೊಂದಲಗಳು, ಅತೃಪ್ತಿಗಳು ಮತ್ತು ಸರಣಿ ರಾಜೀನಾಮೆಗಳು ಜರುಗುತ್ತಿದ್ದರೂ ಕಾಂಗ್ರೆಸ್ ನಾಯಕರು ಮಾತ್ರ ಪಕ್ಷದಲ್ಲಿ ಎಲ್ಲವೂ ಸುಸೂತ್ರವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇವರ ಇಂತಹ ಆಡಳಿತವನ್ನು ರಾಜ್ಯದ ಜನತೆ ನಂಬಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದ ತಪ್ಪಿಗೆ ಕರ್ನಾಟಕದ ಜನತೆ ಇನ್ನು ಏನೇನು ಆಡಳಿತಾತ್ಮಕ ಗೊಂದಲಗಳನ್ನು ನೋಡಬೇಕಾಗಿದೆಯೋ ಆ ದೇವರೇ ಬಲ್ಲ ಎಂದು ಹೇಳುವ ಮೂಲಕ ಹೊಸ ಸರ್ಕಾರದ ಆರಂಭಿಕ ಬಿಕ್ಕಟ್ಟಿನ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಸವಣ್ಣ ಮತ್ತು ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ನಾಯಕರು, ಖಾತೆ ಹಂಚಿಕೆಯ ವಿಷಯ ಬಂದಾಗ ಮಾತ್ರ ‘ಅದೇ ಬೇಕು, ಇದೇ ಬೇಕು’ ಎಂದು ಹಠ ಹಿಡಿದು ಪ್ರಭಾವಿ ಖಾತೆಗಳಿಗಾಗಿ ಲಾಬಿ ನಡೆಸುತ್ತಿದ್ದಾರೆ. ಮಹನೀಯರ ಆಶಯಗಳನ್ನು ಸಾಕಾರಗೊಳಿಸಬೇಕಾದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣದಂತಹ ಪ್ರಮುಖ ಇಲಾಖೆಗಳನ್ನು ಸ್ವಯಂಪ್ರೇರಿತರಾಗಿ ಕೇಳುವವರೂ ಇಲ್ಲ, ನೀಡಿದರೆ ಸಂತೋಷದಿಂದ ಸ್ವೀಕರಿಸುವವರೂ ಇಲ್ಲ ಎಂದು ಹೇಳಿದ್ದಾರೆ. ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಹಲುಬುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಇದೇ ಎಂದು ಟೀಕಿಸಿರುವ ಅವರು, ಪ್ರಸ್ತುತ ಸಚಿವ ಸಂಪುಟದಲ್ಲಿ ಮಹಿಳಾ ಸಚಿವೆಯರ ಪ್ರಾತಿನಿಧ್ಯವೇ ಇಲ್ಲದಿರುವುದನ್ನು ಬೆಟ್ಟು ಮಾಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಇಲ್ಲದ ದಿನವನ್ನ ನೋಡಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯವಾಡಿರುವ ಅಶೋಕ್, ಸರ್ಕಾರದ ಈ ನಿತ್ಯದ ಕಚ್ಚಾಟಕ್ಕೆ ತೇಪೆ ಹಚ್ಚಲು ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸೂರ್ಜೆವಾಲ ಅವರು ಬೆಂಗಳೂರಿನಲ್ಲೇ ಒಂದು ಮನೆ ಮಾಡಿಕೊಂಡು ಇಲ್ಲೇ ಇದ್ದುಬಿಡುವುದು ಒಳ್ಳೆಯದು ಎಂದು ಲೇವಡಿ ಮಾಡಿದ್ದಾರೆ.

