Tue. Oct 20th, 2026

ಪಥಸಂಚಲನಕ್ಕೆ ಅನುಮತಿ ಪಡೆದೇ ಪಡೆಯುತ್ತೇವೆ; ಸರ್ಕಾರ ಕುಂಟು ನೆಪ ಹೇಳದಿರಲಿ: ಸಚಿವ ಪ್ರಿಯಾಂಕ್ ಖರ್ಗೆಗೆ ಎಸ್‌‌. ಸುರೇಶ್ ಕುಮಾರ್ ತಿರುಗೇಟು

Share this with Friends

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಪಥಸಂಚಲನಕ್ಕೆ (Route March) ಅಧಿಕೃತ ಅನುಮತಿ ಪಡೆಯುವ ಕುರಿತು ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಪೋಸ್ಟ್‌ಗೆ ಮಾಜಿ ಸಚಿವರು ಹಾಗೂ ಹಿರಿಯ ಬಿಜೆಪಿ ನಾಯಕ ಎಸ್‌‌. ಸುರೇಶ್ ಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ಎಂದಿಗೂ ನಿಯಮಾವಳಿಗಳ ಪ್ರಕಾರವೇ ಅನುಮತಿ ಪಡೆದು ಕಾರ್ಯಕ್ರಮ ನಡೆಸುತ್ತಾ ಬಂದಿದೆ, ಹೀಗಾಗಿ ಸರ್ಕಾರ ಕುಂಟು ನೆಪಗಳನ್ನು ಹೇಳುವುದನ್ನು ನಿಲ್ಲಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕವೇ ಉತ್ತರಿಸಿರುವ ಸುರೇಶ್ ಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾರಿಗೂ ತೊಂದರೆ ಕೊಟ್ಟ ಇತಿಹಾಸವಿಲ್ಲ:

“ನನ್ನ ಪ್ರೀತಿಯ ರಾಜ್ಯದ ಗೃಹ ಸಚಿವರೇ, ಆರ್‌ಎಸ್ಎಸ್ ಪಥಸಂಚಲನದ ವೇಳೆ ಸಾರ್ವಜನಿಕರಿಗೆ ತೊಂದರೆಯಾದ ಇತಿಹಾಸವೇ ಇಲ್ಲ. ಇಷ್ಟು ದಶಕಗಳಿಂದಲೂ ಆರ್‌ಎಸ್‌ಎಸ್ ಯಾವಾಗಲೂ ಕಾನೂನುಬದ್ಧವಾಗಿ ಅನುಮತಿ ಪಡೆದೇ ತನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸರ್ಕಾರ ಈ ವಿಚಾರದಲ್ಲಿ ಅನಗತ್ಯವಾಗಿ ಕುಂಟು ನೆಪಗಳನ್ನು ಹುಡುಕದಿದ್ದರೆ ಸಾಕು” ಎಂದು ಅವರು ಹೇಳಿದ್ದಾರೆ.

ಸ್ವಚ್ಛತೆಯ ಜವಾಬ್ದಾರಿಯೂ ಸಂಘದ್ದೇ:

ರೂಟ್ ಮಾರ್ಚ್ ವೇಳೆ ಪೊಲೀಸ್ ಇಲಾಖೆಗೆ ಮತ್ತು ಸರ್ಕಾರಕ್ಕೆ ಆಗುವ ವ್ಯವಸ್ಥೆಗಳ ವೆಚ್ಚ ಹಾಗೂ ಶ್ರಮದ ಕುರಿತಾದ ಗೃಹಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, “ಪಥಸಂಚಲನದಲ್ಲಿ ಭಾಗವಹಿಸುವ ಸ್ವಯಂಸೇವಕರು ತಾವು ತಿಂದ ಊಟದ ಪ್ಯಾಕೆಟ್ ಮತ್ತು ಕುಡಿದ ನೀರಿನ ಬಾಟಲಿಗಳನ್ನು ತಾವೇ ಸ್ವಚ್ಛಗೊಳಿಸುತ್ತಾರೆ. ಆ ತ್ರಾಸನ್ನು ಸಂಘವು ಎಂದಿಗೂ ಸರ್ಕಾರಕ್ಕೆ ನೀಡುವುದಿಲ್ಲ. ಅಬ್ಬಬ್ಬಾ ಎಂದರೆ, ಪಥಸಂಚಲನ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ಗಣವೇಷಧಾರಿಗಳ (ಸ್ವಯಂಸೇವಕರ) ಮೇಲೆ ಗೌರವದಿಂದ ಎಸೆಯುವ ಹೂವಿನ ದಳಗಳನ್ನು ಕ್ಲೀನ್ ಮಾಡುವ ಕೆಲಸ ಮಾತ್ರ ಸರ್ಕಾರಕ್ಕೆ ಸಿಗಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಕೊನೆಯಲ್ಲಿ ‘ಎಲ್ಲರೊಂದೇ’ ಎಂಬ ಸಂದೇಶದೊಂದಿಗೆ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

 


Share this with Friends

Related Post