ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ ಬಿಜೆಪಿ ಇಂದು ತನ್ನ ಅಖಂಡ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿತು. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜಾಥಾ ನಡೆಸಿದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಭಾವಿ ನಾಯಕರ ದಂಡಿನೊಂದಿಗೆ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಿದರು.
ಬೆಣ್ಣೆ ನಗರಿಯಲ್ಲಿ ಕೇಸರಿ ಅಲೆ:
ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಬೃಹತ್ ರೋಡ್ ಶೋ ಬಿಜೆಪಿಯ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕೇಸರಿ ಧ್ವಜಗಳು, ಟೋಪಿಗಳು ಮತ್ತು ಜಯಘೋಷಗಳ ನಡುವೆ ಇಡೀ ನಗರವೇ ಕೇಸರಿ ಮಯವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಗಮನವು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿತು. ತೆರೆದ ವಾಹನದಲ್ಲಿ ಸಾಗಿದ ನಾಯಕರು ಹಸ್ತಲಾಘವ ಮಾಡುತ್ತಾ ಜನಸಾಗರಕ್ಕೆ ಅಭಿನಂದನೆ ಸಲ್ಲಿಸಿದರು.
ಮುನಿಸು ಮರೆತ ನಾಯಕರು; ಒಗ್ಗಟ್ಟಿನ ಪೆರೇಡ್:
ಕಳೆದ ಕೆಲವು ದಿನಗಳಿಂದ ಜಿಲ್ಲಾ ರಾಜಕಾರಣದಲ್ಲಿ ಭಿನ್ನಾಭಿಪ್ರಾಯದ ಹೊಗೆಯಾಡುತ್ತಿದ್ದರೂ, ಇಂದು ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು. ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕೈಜೋಡಿಸಿ ನಿಂತ ಉಭಯ ನಾಯಕರು, ವೈಯಕ್ತಿಕ ಭಿನ್ನಾಭಿಪ್ರಾಯಕ್ಕಿಂತ ಪಕ್ಷದ ಗೆಲುವೇ ಮುಖ್ಯ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದರು
ಶಕ್ತಿ ಪ್ರದರ್ಶನದ ಮುಖ್ಯಾಂಶಗಳು:
ಜನಸಾಗರ: ದುರ್ಗಾಂಬಿಕಾ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಿಲೋಮೀಟರ್‌ಗಟ್ಟಲೆ ಹರಡಿದ್ದ ಕಾರ್ಯಕರ್ತರ ದಂಡು.
ವಿಜಯದ ವಿಶ್ವಾಸ: “ಈ ಬೃಹತ್ ಜನಸ್ತೋಮವೇ ಸಾಕ್ಷಿ, ದಾವಣಗೆರೆ ದಕ್ಷಿಣದಲ್ಲಿ ಕಮಲ ಅರಳುವುದಕ್ಕೆ ಇನ್ನು ಕಾಲಗಣನೆ ಮಾತ್ರ ಬಾಕಿ,” ಎಂದು ಬಿ.ಎಸ್.ವೈ ಅಬ್ಬರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದ ನಂತರ ಅಭ್ಯರ್ಥಿ ಶ್ರೀನಿವಾಸ್ ಅವರು, “ಇಂದು ಹರಿದು ಬಂದಿರುವ ಈ ಜನಸಾಗರ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕ್ಷೇತ್ರದ ಪ್ರತಿ ಮತದಾರರ ಆಶೀರ್ವಾದದೊಂದಿಗೆ ಈ ಬಾರಿ ಐತಿಹಾಸಿಕ ಜಯ ದಾಖಲಿಸುತ್ತೇವೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

