Fri. Nov 1st, 2024

ಕೊಳಗಲ್ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಗಲಾಟೆ, 44 ಸೆಕ್ಷನ್ ಜಾರಿ

144 Section
Share this with Friends

ಬಳ್ಳಾರಿ.ಏ.8 : ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ನಡೆದ ಗಲಾಟೆಯಲ್ಲಿ ಪಿಎಸ್‍ಐ ಸೇರಿ 30ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸ್ಥಳದಲ್ಲಿ ಒಂದು ಡಿಎಆರ್ ಹಾಗೂ ಕೆಎಸ್‍ಆರ್‌ಪಿ ತುಕಡಿ ಸೇರಿದಂತೆ 150 ಪೊಲೀಸರನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಮತ್ತು ಎಎಸ್‍ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಳ್ಳಾರಿ ಗ್ರಾಮೀಣ ಭಾಗದ ಸಿಪಿಐ ಸತೀಶ್, ಪಿಎಸ್‍ಐ ಸಂತೋಷ್, ಒಬ್ಬರು ಕಾನ್ಸ್‌ಟೇಬಲ್‌ಗೆ ಗಾಯಗಳಾಗಿವೆ. ಸಂತೋಷ್ ಅವರ ತಲೆಗೆ ಪೆಟ್ಟಾಗಿದ್ದು, ಅವರನ್ನು ಬಳ್ಳಾರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕೆಲವು ತಿಂಗಳ ಹಿಂದೆ ಎರ್ರೆಪ್ಪಸ್ವಾಮಿ ಮೂರ್ತಿಯನ್ನು ಎಸ್‍ಸಿ ಸಮುದಾಯದವರು ಪ್ರತಿಷ್ಠಾಪಿಸಿದ್ದರು. ಇದೀಗ ಕುರುಬ ಸಮುದಾಯದವರಿಂದ ಮೂರ್ತಿ ಪ್ರತಿಷ್ಠಾಪಿಸಲು ಮುಂದಾದಾಗ ಈ ಗಲಾಟೆ ನಡೆದಿದೆ. ಮಠದ ಮೂಲ ಸ್ವಾಮಿ ಎರ್ರಿಸ್ವಾಮಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಈಗ ಎಸ್‍ಸಿ ಸಮುದಾಯಕ್ಕೆ ಸೇರಿದ ಎರ್ರೆಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ ಎನ್ನುವ ವಿಚಾರಕ್ಕೆ ಗಲಾಟೆಯಾಗಿದೆ.


Share this with Friends

Related Post