ಬೆಂಗಳೂರು: ಕರ್ನಾಟಕದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಸಮೀಪ ನಿರ್ಮಿಸುವ ಬದಲು, ತುಮಕೂರು ಜಿಲ್ಲೆಯ ಶಿರಾ ಬಳಿ ಸ್ಥಾಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಒತ್ತಾಯಿಸಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಮಧ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಭಾರಿ ವೇಗ ಸಿಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಜನಪ್ರತಿನಿಧಿಗಳ ವ್ಯಾಪಕ ಬೆಂಬಲ:
ಕಳೆದ ವರ್ಷ ಮಾರ್ಚ್ 20ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ, ಹಾವೇರಿ ಹಾಗೂ ರಾಯಚೂರು ಸೇರಿದಂತೆ ಹಲವು ಪ್ರಮುಖ ಜಿಲ್ಲೆಗಳ ಶಾಸಕರು ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ತಮಗೆ ಲಿಖಿತ ಪತ್ರ ಬರೆದು ಮನವಿ ಮಾಡಿದ್ದರು ಎಂದು ಸೋಮಣ್ಣ ನೆನಪಿಸಿಕೊಂಡಿದ್ದಾರೆ. ಈ ಭಾಗದ ಜನಪ್ರತಿನಿಧಿಗಳ ಆಶಯದಂತೆ, ತಾವೂ ಕೂಡ ಕಳೆದ ವರ್ಷ ಏಪ್ರಿಲ್ 22ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರಿಗೆ ಅಧಿಕೃತ ಪತ್ರ ಬರೆದು ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯ:
ಕರ್ನಾಟಕವು ಸದ್ಯ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಅತಿಹೆಚ್ಚು ಪ್ರಗತಿ ಸಾಧಿಸಿದೆ. ಆದರೆ, ಬೆಂಗಳೂರಿಗೆ ಪರ್ಯಾಯವಾಗಿ ರಾಜ್ಯದ ಉಳಿದ ನಗರ ಮತ್ತು ಗ್ರಾಮೀಣ ಭಾಗಗಳನ್ನು ಸಶಕ್ತವಾಗಿ ಬೆಳೆಸುವುದು ಎಲ್ಲಾ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಮತ್ತೊಂದು ವಿಮಾನ ನಿಲ್ದಾಣವನ್ನು ಬೆಂಗಳೂರಿನ ಆಸುಪಾಸಿನಲ್ಲೇ ನಿರ್ಮಿಸಿದರೆ ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಬೆಳವಣಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಇರುವ ಪ್ರಮುಖ ಪೂರಕ ಅಂಶಗಳು:
ಕೈಗಾರಿಕಾ ಜಾಲ: ಶಿರಾದ ಸುತ್ತಮುತ್ತ ಮುಂಬೈ–ಬೆಂಗಳೂರು ಮತ್ತು ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗಳು ಹರಡಿಕೊಂಡಿವೆ.
ಆರ್ಥಿಕ ವಲಯ: ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ) ಹಾಗೂ ಕೆಐಎಡಿಬಿ (KIADB) ಕೈಗಾರಿಕಾ ಪ್ರದೇಶಗಳು ಇಲ್ಲಿ ಸಕ್ರಿಯವಾಗಿವೆ.
ಸಾರಿಗೆ ಸಂಪರ್ಕ: NH-48, NH-69, NH-544E ನಂತಹ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಜಾಲ ಮತ್ತು ಹೊಸ ರೈಲು ಮಾರ್ಗಗಳ ಸಂಪರ್ಕ ಈ ಭಾಗಕ್ಕಿದೆ.
ವಿಶಾಲ ಸರ್ಕಾರಿ ಭೂಮಿ: ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚಿನ ಪ್ರಮಾಣದ ಸರ್ಕಾರಿ ಭೂಮಿ ಶಿರಾದಲ್ಲಿ ಲಭ್ಯವಿದ್ದು, ಭೂಸ್ವಾಧೀನ ಪ್ರಕ್ರಿಯೆ ಸುಲಭವಾಗಲಿದೆ.
ನೀರಿನ ಸೌಲಭ್ಯ: ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಗಳ ಕಾಲುವೆಗಳಿಂದ ಈ ಭಾಗದಲ್ಲಿ ನಿರಂತರ ನೀರಿನ ಲಭ್ಯತೆ ಇರಲಿದೆ.
ಪ್ರತಿಷ್ಠಿತ ರಕ್ಷಣಾ ಸಂಸ್ಥೆಗಳು: ಚಿತ್ರದುರ್ಗದ ಡಿಆರ್‌ಡಿಒ (DRDO), ಭಾರತೀಯ ವಿಜ್ಞಾನ ಸಂಸ್ಥೆ (IISc) ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯಲ್ಲಿರುವ ಹೆಚ್‌ಎಎಲ್ (HAL) ಹೆಲಿಕಾಪ್ಟರ್ ಉತ್ಪಾದನಾ ಘಟಕಗಳು ಶಿರಾಗೆ ಅತ್ಯಂತ ಸಮೀಪದಲ್ಲಿವೆ.
ಬಿಜಿಎಸಿಎ (DGCA) ನಿಯಮಾವಳಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ನಿಯಮಗಳ ಪ್ರಕಾರ, ನೂತನ ನಿಲ್ದಾಣವು ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 150 ಕಿ.ಮೀ ದೂರದಲ್ಲಿರಲಿದ್ದು, ತಾಂತ್ರಿಕ ನಿಯಮಗಳಿಗೆ ಸೂಕ್ತವಾಗಿದೆ.
ಆರ್ಥಿಕತೆ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಬಲ:
ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ಬರುವುದರಿಂದ ಮಧ್ಯ ಮತ್ತು ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಅಂತರರಾಷ್ಟ್ರೀಯ ಪ್ರಯಾಣ ಹಾಗೂ ವ್ಯಾಪಾರ-ಸರಕು ಸಾಗಣೆ (ಕಾರ್ಗೋ) ಸೌಲಭ್ಯ ಹತ್ತಿರವಾಗಲಿದೆ. ಇದು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಕೈಗಾರಿಕಾ ಹೂಡಿಕೆ, ಹೊಸ ಉದ್ಯೋಗಾವಕಾಶಗಳು ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದ್ದು, ರಾಜ್ಯದ ಸಮತೋಲಿತ ಪ್ರಗತಿಗೆ ಮುನ್ನುಡಿ ಬರೆಯಲಿದೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ತುಮಕೂರಿನ ಶಿರಾ ಭಾಗದಲ್ಲೇ ವಿಮಾನ ನಿಲ್ದಾಣ ನಿರ್ಮಿಸಲು ಕೇಂದ್ರ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದೇನೆ. ರಾಜ್ಯ ಸರ್ಕಾರವೂ ಸಹ ಯಾವುದೇ ಪ್ರಾದೇಶಿಕ ತಾರತಮ್ಯವಿಲ್ಲದೆ ಸಮಗ್ರ ಅಭಿವೃದ್ಧಿಯನ್ನೇ ಮಾನದಂಡವಾಗಿಟ್ಟುಕೊಂಡು ಶಿರಾದ ಪರವಾಗಿ ಪೂರಕ ನಿರ್ಧಾರ ಕೈಗೊಳ್ಳಬೇಕು” ಎಂದು ಅವರು ಕೋರಿದ್ದಾರೆ.

