Sat. Jun 27th, 2026

ಬಿಜೆಪಿಯಲ್ಲಿ ತಾರಕಕ್ಕೇರಿದ ಆಂತರಿಕ ಜಟಕಾಪಟಿ: ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ಡಾ. ಕೆ. ಸುಧಾಕರ್ ನಡುವೆ ಬಹಿರಂಗ ಸವಾಲು-ಪ್ರತಿಸವಾಲು!

Share this with Friends

ಬೆಂಗಳೂರು: ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಾದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ನಡುವಿನ ಶೀತಲ ಸಮರ ಈಗ ತಾರಕಕ್ಕೇರಿದೆ. ನಿನ್ನೆ ಮತ್ತು ಇಂದು ಉಭಯ ನಾಯಕರು ಪರಸ್ಪರ ವೈಯಕ್ತಿಕ ನಿಂದನೆ ಹಾಗೂ ರಾಜಕೀಯ ಸವಾಲುಗಳನ್ನು ಹಾಕಿಕೊಳ್ಳುವ ಮೂಲಕ ಬಹಿರಂಗ ವಾಗ್ದಾಳಿಗೆ ಇಳಿದಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಸ್ಥಳೀಯವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವೊಂದರ ಆಯೋಜನೆ ಮತ್ತು ಕ್ಷೇತ್ರದ ರಾಜಕೀಯ ಹಸ್ತಕ್ಷೇಪದ ವಿಚಾರವೇ ಈ ಇಬ್ಬರು ನಾಯಕರ ನಡುವಿನ ಮುನಿಸು ಬೀದಿಗೆ ಬರಲು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ವಿಶ್ವನಾಥ್ ಸಿಡಿಸಿದ ಬಾಂಬ್: “ಹುತ್ತಕ್ಕೆ ಬಂದು ಸೇರಿದವನು ನೀನು!”

ನಿನ್ನೆ ಸಂಸದ ಸುಧಾಕರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ಶಾಸಕ ಎಸ್.ಆರ್. ವಿಶ್ವನಾಥ್, “ಪಕ್ಷದಲ್ಲಿ ನೀನು ಕೇವಲ ಪಕ್ಷಾಂತರಿ. ಬೇರೆ ಕಡೆಯಿಂದ ಗೆದ್ದು ಬಂದು ಈಗ ಒಳಗೊಳಗೇ ಇತರ ಪಕ್ಷದ ನಾಯಕರೊಂದಿಗೆ ಕೈಜೋಡಿಸುತ್ತಿದ್ದೀಯಾ. ನಾವು ರಕ್ತ ಸುರಿಸಿ, ಕಷ್ಟಪಟ್ಟು ಈ ಪಕ್ಷದ ಮನೆಯನ್ನು ಕಟ್ಟಿದ್ದೇವೆ. ಆದರೆ ನೀನು ರೆಡಿಯಾಗಿರುವ ಹುತ್ತಕ್ಕೆ ಬಂದು ಸೇರಿದವನು” ಎಂದು ಅತ್ಯಂತ ಕಠಿಣ ಪದಗಳಿಂದ ನಿಂದಿಸಿದ್ದರು.

ಇಷ್ಟಕ್ಕೇ ನಿಲ್ಲದ ವಿಶ್ವನಾಥ್, “ಮಾತನಾಡುವಾಗ ಎಚ್ಚರಿಕೆ ಇರಲಿ. ನಿಮಗೆ ಅಷ್ಟೊಂದು ಧೈರ್ಯವಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ” ಎಂದು ಮುಕ್ತ ಸವಾಲು ಹಾಕಿದ್ದರು. ಅಲ್ಲದೆ, ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಹೊಸ ಯುವ ನಾಯಕನಿಗೆ ಪಕ್ಷದ ಟಿಕೆಟ್ ಕೊಡಿಸುವುದಾಗಿ ಘೋಷಿಸಿ ಸಂಸದರಿಗೆ ನೇರ ಟಾಂಗ್ ನೀಡಿದ್ದರು.

ಇಂದು ಸುಧಾಕರ್ ತಿರುಗೇಟು: “ನಿಮ್ಮ ಕ್ಷೇತ್ರದಲ್ಲೇ ನಿಂತು ಸೋಲಿಸುತ್ತೇನೆ!”

ನಿನ್ನೆಯ ಶಾಸಕರ ವಾಗ್ದಾಳಿಗೆ ಇಂದು ಸಂಸದ ಡಾ. ಕೆ. ಸುಧಾಕರ್ ಅವರು ಅಷ್ಟೇ ತೀಕ್ಷ್ಣವಾಗಿ ಮತ್ತು ಆಕ್ರೋಶಭರಿತವಾಗಿ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಅವರ ಸವಾಲನ್ನು ಸ್ವೀಕರಿಸಿದ ಸಂಸದರು, “ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮ್ಮ ವೈಯಕ್ತಿಕ ಪ್ರತಿಷ್ಠೆಗೋಸ್ಕರ ಪಕ್ಷದಲ್ಲಿ ಗೊಂದಲ ಸೃಷ್ಟಿಸಬೇಡಿ. ಅಷ್ಟೊಂದು ಸೊಕ್ಕಿದ್ದರೆ ನೋಡೋಣ, ನಾನು ನಿಮ್ಮ ಕ್ಷೇತ್ರದಲ್ಲೇ ನಿಂತು ನಿಮ್ಮನ್ನು ಸೋಲಿಸಿ ತೋರಿಸುತ್ತೇನೆ” ಎಂದು ಇಂದು ನೇರ ಸವಾಲು ಹಾಕಿದ್ದಾರೆ.

“ನಾನು ಇಡೀ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದು, ಈ ಭಾಗವು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡುವುದು ನನ್ನ ಹಕ್ಕು. ಇದಕ್ಕೆ ಅಡ್ಡಿಪಡಿಸಲು ಅಥವಾ ಆಕ್ಷೇಪಿಸಲು ವಿಶ್ವನಾಥ್ ಯಾರು?” ಎಂದು ಸುಧಾಕರ್ ಪ್ರಶ್ನಿಸಿದ್ದಾರೆ.

ಕಳೆದ 48 ಗಂಟೆಗಳಿಂದ ನಡೆಯುತ್ತಿರುವ ಈ ಹದ್ದು ಮೀರಿದ ಬಹಿರಂಗ ಜಟಕಾಪಟಿಯು ಪಕ್ಷದ ಚೌಕಟ್ಟನ್ನು ಮೀರಿದ್ದು, ಉಭಯ ನಾಯಕರ ನಡುವಿನ ಈ ವೈಷಮ್ಯ ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

 


Share this with Friends

Related Post