ಬೆಂಗಳೂರು: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ (TCS) ಕಂಪನಿಯಲ್ಲಿ ಬೆಳಕಿಗೆ ಬಂದಿರುವ ಸಂಘಟಿತ ಲವ್ ಜಿಹಾದ್ ಮತ್ತು ಮತಾಂತರ ಜಾಲದ ಬೆನ್ನಲ್ಲೇ, ಕರ್ನಾಟಕದ ಕಾರ್ಪೊರೇಟ್ ಕಂಪನಿಗಳಲ್ಲೂ ಇಂತಹ ಶಕ್ತಿಗಳು ಸಕ್ರಿಯವಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿರುವುದು ಈ ಸಂಚಿನ ಭಾಗವಾಗಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 44,826 ವಯಸ್ಕ ಮಹಿಳೆಯರು ಹಾಗೂ 6,894 ಬಾಲಕಿಯರು ನಾಪತ್ತೆಯಾಗಿದ್ದಾರೆ. ಕೇವಲ ಬೆಂಗಳೂರಿನಲ್ಲೇ 2,290 ಹೆಣ್ಣು ಮಕ್ಕಳು ಕಾಣೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಲವ್ ಜಿಹಾದ್ ಎಂಬುದು ಈಗ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಮಸ್ಯೆಯಾಗಿ ಉಳಿಯದೆ, ವ್ಯವಸ್ಥಿತವಾದ ಹಣದ ಪೂರೈಕೆ, ತರಬೇತಿ ಮತ್ತು ಮತಾಂತರದ ಷಡ್ಯಂತ್ರವನ್ನು ಹೊಂದಿರುವ ಸಂಘಟಿತ ಜಾಲವಾಗಿ ಮಾರ್ಪಟ್ಟಿದೆ ಎಂದು ವಿವರಿಸಿದರು.
ಕರ್ನಾಟಕವು ಅತಿ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ರಾಜ್ಯವಾಗಿದ್ದು, ಉದ್ಯೋಗಕ್ಕಾಗಿ ಬರುವ ಅಸಹಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಶೋಷಣೆ ಮತ್ತು ಮತಾಂತರ ನಡೆಸಲಾಗುತ್ತಿದೆ. ನಾಸಿಕ್‌ನಲ್ಲಿ ಪೊಲೀಸರು ವಿಶೇಷ ಕಾರ್ಯಪಡೆ ರಚಿಸಿ ಇಂತಹ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಸಂಘಟಿತ ಅಪರಾಧದ ಹಿಂದೆ ವಿದೇಶಿ ನೆಟ್‌ವರ್ಕ್‌ಗಳ ಕೈವಾಡವಿರುವ ಬಗ್ಗೆಯೂ ವರದಿಗಳಿದ್ದು, ಇದು ಇಡೀ ದೇಶವನ್ನು ದುರ್ಬಲಗೊಳಿಸುವ ಸಂಚಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಎಚ್ಚರಿಸಿದರು.
ಈ ಕೂಡಲೇ ರಾಜ್ಯ ಸರ್ಕಾರವು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ದಳ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು. ರಾತ್ರಿ-ಹಗಲು ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಸರ್ಕಾರದ ಜವಾಬ್ದಾರಿಯಾಗಿದ್ದು, ನ್ಯಾಯಾಲಯಗಳೂ ಸಹ ಇಂತಹ ಕೃತ್ಯಗಳನ್ನು ಕೇವಲ ವೈಯಕ್ತಿಕ ಪ್ರಕರಣಗಳೆಂದು ನೋಡದೆ ಸಂಘಟಿತ ಅಪರಾಧ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

