Sat. Jun 6th, 2026

ತುಂಗಭದ್ರಾ ಜಲಾಶಯಕ್ಕೆ ಹೊಸ ಕವಚ: ನಿಗದಿತ ಸಮಯಕ್ಕೂ ಮೊದಲೇ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ

Share this with Friends

ಹೊಸಪೇಟೆ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಕಳೆದ ವರ್ಷ 19ನೇ ಗೇಟ್ ಕೊಚ್ಚಿಹೋದ ಬೆನ್ನಲ್ಲೇ ಕೈಗೆತ್ತಿಕೊಳ್ಳಲಾಗಿದ್ದ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ನವೀಕರಣ ಕಾರ್ಯವು ನಿಗದಿತ ಅವಧಿಗಿಂತ ಮೊದಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಹೌದು,ಕರ್ನಾಟಕದ ಜೀವನಾಡಿ ಎಂದೇ ಕರೆಸಿಕೊಳ್ಳುವ ತುಂಗಭದ್ರಾ ಜಲಾಶಯಕ್ಕೆ ಈಗ ಸಂಪೂರ್ಣ ಸುರಕ್ಷತೆಯ ಕವಚ ದೊರೆತಿದೆ. ಕಳೆದ ಆಗಸ್ಟ್‌ನಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಆತಂಕ ಸೃಷ್ಟಿಸಿದ್ದ ಘಟನೆಯ ನಂತರ, ರಾಜ್ಯ ಸರ್ಕಾರವು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಂಡಿದ್ದ ಎಲ್ಲಾ 33 ಗೇಟ್‌ಗಳ ನವೀಕರಣ ಕಾರ್ಯವು ಏಪ್ರಿಲ್ 26ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಶೇಷವೆಂದರೆ, ಮೇ ಅಂತ್ಯದವರೆಗೆ ಕಾಲಾವಕಾಶವಿದ್ದರೂ ಸಹ, ನಿಗದಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಈ ಬೃಹತ್ ತಾಂತ್ರಿಕ ಸವಾಲನ್ನು ಎಂಜಿನಿಯರ್‌ಗಳು ಮೆಟ್ಟಿ ನಿಂತಿದ್ದಾರೆ.

ಯುದ್ಧೋಪಾದಿಯಲ್ಲಿ ನಡೆದ ಕಾಮಗಾರಿ

ಕಳೆದ ವರ್ಷದ ಅನಾಹುತದಿಂದಾಗಿ ಜಲಾಶಯದ ಭದ್ರತೆಯ ಬಗ್ಗೆ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ಭೀತಿ ಎದುರಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಲಸಂಪನ್ಮೂಲ ಇಲಾಖೆ, ಸುಮಾರು 80 ವರ್ಷ ಹಳೆಯದಾಗಿದ್ದ ಎಲ್ಲಾ ಹಳೆಯ ಗೇಟ್‌ಗಳನ್ನು ಬದಲಾಯಿಸಲು ತೀರ್ಮಾನಿಸಿತು. ಅಹಮದಾಬಾದ್ ಮೂಲದ ಖಾಸಗಿ ಕಂಪನಿಗೆ ಈ ಜವಾಬ್ದಾರಿ ನೀಡಲಾಗಿದ್ದು, ಸುಮಾರು 52 ರಿಂದ 54 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಸರಿಸುಮಾರು 121 ದಿನಗಳ ಕಾಲ ದಿನದ 24 ಗಂಟೆಯೂ ಕಾರ್ಮಿಕರು ಮತ್ತು ತಾಂತ್ರಿಕ ತಜ್ಞರು ಶ್ರಮಿಸಿದ ಫಲವಾಗಿ ಇಂದು ಜಲಾಶಯವು ನವ ಚೈತನ್ಯ ಪಡೆದಿದೆ.

70 ವರ್ಷಗಳ ಗ್ಯಾರಂಟಿ ಹಾಗೂ ತಾಂತ್ರಿಕ ಶಕ್ತಿ

ಹೊಸದಾಗಿ ಅಳವಡಿಸಲಾದ ಈ ಕ್ರಸ್ಟ್ ಗೇಟ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉನ್ನತ ಗುಣಮಟ್ಟದ ಉಕ್ಕಿನಿಂದ ತಯಾರಿಸಲ್ಪಟ್ಟಿವೆ. ಹೈಡ್ರೋ-ಮೆಕ್ಯಾನಿಕಲ್ ತಜ್ಞರ ಪ್ರಕಾರ, ಈ ಗೇಟ್‌ಗಳು ಸರಿಯಾದ ನಿರ್ವಹಣೆ ಮಾಡಿದರೆ ಮುಂದಿನ 70 ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸಲಿವೆ. ಈಗಾಗಲೇ ಹಲವಾರು ಗೇಟ್‌ಗಳ ಪ್ರಾಯೋಗಿಕ ಕಾರ್ಯಾಚರಣೆಯನ್ನು (Testing) ಯಶಸ್ವಿಯಾಗಿ ನಡೆಸಲಾಗಿದ್ದು, ಗೇಟ್‌ಗಳನ್ನು ಮೇಲೆತ್ತುವ ಮತ್ತು ಕೆಳಕ್ಕಿಳಿಸುವ ಪ್ರಕ್ರಿಯೆ ಸುಗಮವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೈತ ಸಮುದಾಯದಲ್ಲಿ ಚಿಮ್ಮಿದ ಹರ್ಷ

ತುಂಗಭದ್ರಾ ಜಲಾಶಯದ ಮೇಲೆ ಅವಲಂಬಿತವಾಗಿರುವ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಈಗ ಮಂದಹಾಸ ಮೂಡಿದೆ. ಜಲಾಶಯದಲ್ಲಿ 105.788 ಟಿಎಂಸಿ ನೀರನ್ನು ಸಂಗ್ರಹಿಸುವ ಪೂರ್ಣ ಸಾಮರ್ಥ್ಯ ಈಗ ಮರುಕಳಿಸಿದೆ. ಮುಂಬರುವ ಮುಂಗಾರು ಹಂಗಾಮಿಗೆ ಮುನ್ನವೇ ಕಾಮಗಾರಿ ಮುಗಿದಿರುವುದರಿಂದ, ಮಳೆಗಾಲದಲ್ಲಿ ಹರಿದು ಬರುವ ಪ್ರತಿ ಹನಿ ನೀರನ್ನು ಸಂರಕ್ಷಿಸಲು ಸಾಧ್ಯವಾಗಲಿದೆ. ಇದು ಕೇವಲ ತಾಂತ್ರಿಕ ವಿಜಯವಲ್ಲ, ಲಕ್ಷಾಂತರ ರೈತ ಕುಟುಂಬಗಳ ಆರ್ಥಿಕ ಭದ್ರತೆಯ ವಿಜಯವೂ ಆಗಿದೆ.

 


Share this with Friends

Related Post