Sat. Jun 6th, 2026

ಕೃಷಿ ಲಾಭದಾಯಕ ಉದ್ಯಮವಾಗಲಿ ಎಂಬುದು ಸರ್ಕಾರದ ಗುರಿ: ಸಚಿವ ಚಲುವರಾಯಸ್ವಾಮಿ

Share this with Friends

ಬೆಂಗಳೂರು: ವ್ಯವಸಾಯವನ್ನು ಕೇವಲ ಬದುಕಿನ ಅನಿವಾರ್ಯತೆಯನ್ನಾಗಿಸದೆ, ಅದನ್ನೊಂದು ಗೌರವಯುತ ಹಾಗೂ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವುದೇ ರಾಜ್ಯ ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಕೃಷಿ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಕೃಷಿ – ಮಾಧ್ಯಮ ಸಂವಾದ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಕೃಷಿ ಇಲಾಖೆಯ ಕಳೆದ ಮೂರು ವರ್ಷಗಳ ಸಾಧನೆ ಹಾಗೂ ರೈತಸ್ನೇಹಿ ಸುಧಾರಣೆಗಳ ಪ್ರಗತಿ ಪರಿಶೀಲನಾ ವರದಿಯನ್ನು ಅವರು ಬಿಡುಗಡೆ ಮಾಡಿದರು.

ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಮಾಣ

ರಾಜ್ಯ ಸರ್ಕಾರದ ಸುಸ್ಥಿರ ಯೋಜನೆಗಳು ಹಾಗೂ ದಕ್ಷ ಪ್ರಗತಿ ಕಾರ್ಯಕ್ರಮಗಳಿಂದಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ ಎಂದು ಸಚಿವರು ವಿವರಿಸಿದರು. ಲಕ್ಷಾಂತರ ಅನ್ನದಾತರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಯಾಂತ್ರೀಕರಣ ಉಪಕರಣಗಳು ಹಾಗೂ ಸೂಕ್ಷ್ಮ ನೀರಾವರಿ ಸೌಲಭ್ಯಗಳನ್ನು ತಲುಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲಾಗಿದೆ ಎಂದರು.

ಕೃಷಿ ಭಾಗ್ಯ ಮತ್ತು ಹೈಟೆಕ್ ಯಾಂತ್ರೀಕರಣ

ಕೃಷಿ ಹೊಂಡಗಳ ಆಸರೆ: ‘ಕೃಷಿ ಭಾಗ್ಯ’ ಯೋಜನೆಯ ಅಡಿಯಲ್ಲಿ ಒಟ್ಟು ₹435.05 ಕೋಟಿ ಸಹಾಯಧನ ಒದಗಿಸುವ ಮೂಲಕ 36,213 ಕೃಷಿ ಹೊಂಡಗಳನ್ನು ಯಶಸ್ವಿಯಾಗಿ ನಿರ್ಮಿಸಿಕೊಡಲಾಗಿದೆ ಎಂದರು.

ಹಾರ್ವೆಸ್ಟರ್ ಹಬ್ಸ್: ಬೆಳೆ ಕೊಯ್ಲು ಪ್ರಕ್ರಿಯೆಯನ್ನು ಸುಲಭಗೊಳಿಸಲು ₹173 ಕೋಟಿ ವೆಚ್ಚದಲ್ಲಿ 524 ಆಧುನಿಕ ‘ಹೈಟೆಕ್ ಹಾರ್ವೆಸ್ಟರ್ ಹಬ್’ಗಳನ್ನು ಸ್ಥಾಪಿಸಲಾಗಿದೆ.

ಡಿಜಿಟಲ್ ಕ್ರಾಂತಿ ಹಾಗೂ ರಾಷ್ಟ್ರಮಟ್ಟದ ಗೌರವ

ಇಲಾಖೆಯ ಸೇವೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕ್ಯೂಆರ್ ಕೋಡ್ (QR Code), ಎಫ್‌ಐಡಿ (FID) ಹಾಗೂ ‘ಇ-ಸ್ಯಾಪ್’ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕರ್ನಾಟಕಕ್ಕೆ ರಾಷ್ಟ್ರಮಟ್ಟದ ಅತ್ಯುನ್ನತ ಗೌರವ ಲಭಿಸಿದೆ. ಮುಂದಿನ ದಿನಗಳಲ್ಲಿ ‘ಡಿಜಿಟಲ್ ಕೃಷಿ’ ತಂತ್ರಜ್ಞಾನದ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ, ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಇಲಾಖೆ ಶ್ರಮಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ದೇಶಿ ತಳಿ ಸಂರಕ್ಷಣೆ ಮತ್ತು ಸಾವಯವ ತಾಲ್ಲೂಕುಗಳು

ಬೀಜ ಪರಂಪರೆ: ಈ ವಿನೂತನ ಕಾರ್ಯಕ್ರಮದ ಮೂಲಕ 2,100 ಅಪರೂಪದ ದೇಶಿ ತಳಿಗಳನ್ನು ಸಂರಕ್ಷಿಸುವ ಮೂಲಕ ಕರ್ನಾಟಕ ಇಡೀ ದೇಶಕ್ಕೇ ಮಾದರಿಯಾಗಿದೆ.

ಸಾವಯವ ಕೃಷಿ ಉತ್ತೇಜನ: ಜೋಯಿಡಾ ಮತ್ತು ಪಾಂಡವಪುರ ತಾಲ್ಲೂಕುಗಳನ್ನು ಸಂಪೂರ್ಣ ಸಾವಯವ ತಾಲ್ಲೂಕುಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸಿರಿಧಾನ್ಯಕ್ಕೆ ಜಾಗತಿಕ ವೇದಿಕೆ: ಇಲಾಖೆ ಆಯೋಜಿಸಿದ್ದ ಸಿರಿಧಾನ್ಯ ಮೇಳಗಳ ಮೂಲಕ ಬರೋಬ್ಬರಿ ₹335 ಕೋಟಿಗೂ ಅಧಿಕ ಮೊತ್ತದ ವಾಣಿಜ್ಯ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಕಳೆದೆರಡು ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳ ಪ್ರಗತಿಪರ ರೈತರ ಮನೆ, ತೋಟಗಳಿಗೆ ಭೇಟಿ ನೀಡಿ ಸುದೀರ್ಘ ವಿಚಾರ ವಿನಿಮಯ ಮಾಡಿದ್ದೇನೆ. ಈ ಸಂವಾದಗಳಿಂದ ಕಲಿತ ಅನೇಕ ಸಂಗತಿಗಳು ನಮ್ಮ ನೂತನ ಕೃಷಿ ನೀತಿ ಹಾಗೂ ಯೋಜನೆಗಳಾಗಿ ರೂಪುಗೊಂಡಿವೆ. ವಿಶೇಷವೆಂದರೆ, ವೈಜ್ಞಾನಿಕ ಮತ್ತು ಸಾವಯವ ಕೃಷಿ ಮಾಡುತ್ತಿರುವ ಯಾವೊಬ್ಬ ರೈತನೂ ಆರ್ಥಿಕ ತೊಂದರೆಗೆ ಸಿಲುಕಿಲ್ಲ. ಇಂತಹ ಪ್ರಗತಿಪರ ರೈತರು ಪ್ರತಿ ಹಳ್ಳಿಯಲ್ಲೂ ಹೆಚ್ಚಾಗಬೇಕಿದೆ. ಕೃಷಿಯಲ್ಲಿನ ಇಂತಹ ಅತ್ಯುತ್ತಮ ಪದ್ಧತಿಗಳನ್ನು ಪ್ರತಿಯೊಬ್ಬ ರೈತರೂ ಕಲಿತು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಇದನ್ನು ಇಡೀ ಸಮುದಾಯಕ್ಕೆ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ಇದರ ಜೊತೆ ರೈತರಿಗೆ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಹಾಗೂ ಮಾಹಿತಿ ಕಲ್ಪಿಸುವ ದಿಶೆಯಲ್ಲಿ ವಿನೂತನವಾಗಿ ಅಗ್ರಿ ಬಾಟ್‌ ಎನ್ನುವ ತಂತ್ರಜ್ಞಾನವನ್ನು ಶೀಘ್ರದಲ್ಲಿ ಪರಿಚಯಿಸಲಾಗುತ್ತಿದೆ ಎಂದರು.

ನಿರ್ದೇಶಕ ಜಿಟಿ ಪುತ್ರ, ಕೆಪೆಕ್‌  ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ಅಧ್ಯಕ್ಷ ಬಿ ಹೆಚ್‌ ಹರೀಶ್‌ ಸಹಿತ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share this with Friends

Related Post