ಬೆಂಗಳೂರು:ಯಾವುದೇ ರಾಜಕೀಯ ಪಕ್ಷಕ್ಕೆ ಒಂದು ಸಮುದಾಯದ ಬೆಂಬಲ ಶಾಶ್ವತವಲ್ಲ ಎಂಬುದನ್ನು ನಾಯಕರು ಅರ್ಥಮಾಡಿಕೊಳ್ಳಬೇಕು. ರಾಜ್ಯದ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಬದಲಾವಣೆಗಳು ಸಂಭವಿಸುವ ಸೂಚನೆಗಳಿವೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸುವ ಕಾಂಗ್ರೆಸ್, ಈಗ ಅದೇ ಸಮುದಾಯದ ನಾಯಕರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಅಧಿಕಾರಕ್ಕಾಗಿ ಸಮುದಾಯಗಳನ್ನು ಬಳಸಿಕೊಳ್ಳುವ ಇವರ ತಂತ್ರವನ್ನು ಜನರು ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವ ಪರಿಪಾಠ ಇರಬೇಕು. ಒಂದು ವರ್ಗವನ್ನು ಓಲೈಸಿ ಮತ್ತೊಂದನ್ನು ತುಳಿಯುವುದು ಸರಿಯಲ್ಲ,” ಎಂದು ಎಚ್ಚರಿಸಿದರು.
ಯಾವುದೇ ರಾಜಕೀಯ ಪಕ್ಷಕ್ಕೆ ಒಂದು ಸಮುದಾಯದ ಬೆಂಬಲ ಶಾಶ್ವತವಲ್ಲ ಎಂಬುದನ್ನು ನಾಯಕರು ಅರ್ಥಮಾಡಿಕೊಳ್ಳಬೇಕು. ರಾಜ್ಯದ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಬದಲಾವಣೆಗಳು ಸಂಭವಿಸುವ ಸೂಚನೆಗಳಿವೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಸಿಎಂ ಸಿದ್ದರಾಮಯ್ಯಗೆ ತಿರುಗೇಟು:
ಬಿಜೆಪಿಯವರನ್ನು ಸುಳ್ಳುಗಾರರು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಯಾರು ದೊಡ್ಡ ಸುಳ್ಳುಗಾರರು ಎಂಬುದು ಜನರಿಗೆ ತಿಳಿದಿದೆ. ಬೇರೆಯವರನ್ನು ಟೀಕಿಸುವ ಮೊದಲು ಮುಖ್ಯಮಂತ್ರಿಗಳು ತಾವು ನೀಡಿರುವ ಭರವಸೆಗಳು ಮತ್ತು ಹೇಳಿರುವ ಸುಳ್ಳುಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ,” ಎಂದು ತೀಕ್ಷ್ಣವಾಗಿ ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರವನ್ನು ಸೋಲಿಸುವುದೇ ನಮ್ಮ ಮುಂದಿನ ಗುರಿ ಎಂದ ಅವರು, ಈ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
‘ಅಭಿವೃದ್ಧಿ ಕೆಲಸ ನಮ್ಮದು, ಉದ್ಘಾಟನೆಯ ಕ್ರೆಡಿಟ್ ನಿಮ್ಮದಾ?’:
“ನನ್ನ ಅಧಿಕಾರಾವಧಿಯಲ್ಲಿ ಮಂಜೂರಾದ ಸಾಗರಕಟ್ಟೆ ಸೇತುವೆಯನ್ನು ಈಗ ಉದ್ಘಾಟಿಸಿ ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೃತ್ತಿ ಸರಿಯಲ್ಲ,” ಸಿದ್ದರಾಮಯ್ಯ ಅವರ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರದಿಂದ ಸಾಗರಕಟ್ಟೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಅಂದಿನ ನನ್ನ ಸರ್ಕಾರದಲ್ಲೇ ಹಣಕಾಸು ಮಂಜೂರಾತಿ ನೀಡಲಾಗಿತ್ತು. ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು ಕೆಲಸ ಆರಂಭಿಸಲಾಗಿತ್ತು. ಆದರೆ ಈಗಿನ ಸರ್ಕಾರ ಬೇರೆಯವರು ಮಾಡಿದ ಕೆಲಸಗಳನ್ನು ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಗ್ಯಾರಂಟಿ ಭಜನೆ ಬಿಟ್ಟು ವಾಸ್ತವ ನೋಡಿ:
“ಎಲ್ಲಿ ಹೋದರೂ ಗ್ಯಾರಂಟಿಗಳ ಬಗ್ಗೆ ಭಜನೆ ಮಾಡುತ್ತಿರುವ ಸರ್ಕಾರಕ್ಕೆ ಜನರ ನಿಜವಾದ ಸಂಕಷ್ಟ ಅರ್ಥವಾಗುತ್ತಿಲ್ಲ. ಕೇವಲ ₹2000 ನೀಡಿದರೆ ಜನರು ಸುಖದ ಸುಪ್ಪತ್ತಿಗೆಯಲ್ಲಿ ಇದ್ದಾರೆ ಎಂದು ಕಥೆ ಕಟ್ಟುವುದು ನಿಲ್ಲಲಿ. ವಿಧಾನಸೌಧದ ಎಸಿ ರೂಮಿನಲ್ಲಿ ಕುಳಿತು ಕಾರ್ಯಕ್ರಮ ಘೋಷಿಸಿದರೆ ಸಾಲದು, ಹಳ್ಳಿಗಳಿಗೆ ಭೇಟಿ ನೀಡಿ ಜನರ ಬವಣೆ ಏನೆಂಬುದನ್ನು ಖುದ್ದು ನೋಡಬೇಕು,” ಎಂದು ಸಚಿವರು ಕಿವಿಮಾತು ಹೇಳಿದರು.
ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಕುಸಿತ:
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಮತ್ತು ನಾಯಕರ ನಡುವಿನ ಜಟಾಪಟಿಯಿಂದಾಗಿ ಸರ್ಕಾರಿ ಆಡಳಿತ ಯಂತ್ರ ಸಂಪೂರ್ಣವಾಗಿ ಹಳಿತಪ್ಪಿದೆ ಎಂದು ಟೀಕಿಸಿದರು. “ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರ ಕಾಂಗ್ರೆಸ್‌ನಲ್ಲಿನ ಗೊಂದಲಗಳು ಬೀದಿಗೆ ಬಂದಿವೆ. ಸಿಎಂ ಮತ್ತು ಡಿಸಿಎಂ ನಡುವಿನ ಅಧಿಕಾರದ ಪೈಪೋಟಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಇವರ ಈ ಆಂತರಿಕ ಕಚ್ಚಾಟದ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಬೀರುತ್ತಿದೆ,” ಎಂದು ಕಿಡಿಕಾರಿದರು.

