ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವ ನೀರಿನ ಸಂಗ್ರಹವನ್ನು ಆಧರಿಸಿ ಒಟ್ಟು 90 ದಿನಗಳ ಕಾಲ ವಿವಿಧ ಕಾಲುವೆಗಳಿಗೆ ಪ್ರತಿದಿನ 4,100 ಕ್ಯೂಸೆಕ್ನಂತೆ ಇಂದಿನಿಂದಲೇ (ಆಗಸ್ಟ್ 11) ನೀರು ಹರಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಮುನಿರಾಬಾದ್ನ ಟಿಬಿಪಿ ಸಭಾಂಗಣದಲ್ಲಿ ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ನೀರಿನ ಲಭ್ಯತೆ ಮತ್ತು ಹಂಚಿಕೆ ವಿವರ:
ಪ್ರಸ್ತುತ ಜಲಾಶಯದಲ್ಲಿ 82 ಟಿಎಂಸಿ ನೀರಿನ ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯ ಅಂದಾಜಿನ ಪ್ರಕಾರ ಇನ್ನೂ 16 ಟಿಎಂಸಿ ನೀರು ಹರಿದು ಬರುವ ನಿರೀಕ್ಷೆಯಿದೆ. ನೆರೆ ರಾಜ್ಯಗಳಾದ ಆಂಧ್ರಪ್ರದೇಶಕ್ಕೆ 30 ಟಿಎಂಸಿ, ತೆಲಂಗಾಣಕ್ಕೆ 3 ಟಿಎಂಸಿ ಪಾಲು, 2 ಟಿಎಂಸಿ ಡೆಡ್ ಸ್ಟೋರೇಜ್ ಹಾಗೂ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಲೆಕ್ಕ ಹಾಕಿ ರೈತರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಈ ಕೆಳಗಿನಂತೆ ನೀರು ಬಿಡಲು ನಿರ್ಧರಿಸಲಾಗಿದೆ:
ಎಡದಂಡೆ ಮುಖ್ಯ ಕಾಲುವೆ: ಆ. 11 ರಿಂದ ನ. 10 ರವರೆಗೆ ನಿತ್ಯ 4,100 ಕ್ಯೂಸೆಕ್.
ಬಲದಂಡೆ ಮೇಲ್ಮಟ್ಟದ ಕಾಲುವೆ: ಆ. 11 ರಿಂದ ನ. 10 ರವರೆಗೆ ನಿತ್ಯ 1,200 ಕ್ಯೂಸೆಕ್.
ಬಲದಂಡೆ ಕೆಳಮಟ್ಟದ ಕಾಲುವೆ: ಆ. 11 ರಿಂದ ನ. 10 ರವರೆಗೆ ನಿತ್ಯ 650 ಕ್ಯೂಸೆಕ್.
ರಾಯ ಬಸವಣ್ಣ ಕಾಲುವೆ: ಜೂನ್ 1 ರಿಂದ ಡಿಸೆಂಬರ್ 10 ರವರೆಗೆ ಸರಾಸರಿ 180 ಕ್ಯೂಸೆಕ್.
ಎಡದಂಡೆ ಮೇಲ್ಮಟ್ಟದ ಕಾಲುವೆ: ಆ. 11 ರಿಂದ ನ. 10 ರವರೆಗೆ ನಿತ್ಯ 25 ಕ್ಯೂಸೆಕ್.
ತುಂಗಭದ್ರಾ ನದಿಗೆ: ಆ. 11 ರಿಂದ ಆ. 17 ರವರೆಗೆ 500 ಕ್ಯೂಸೆಕ್ ನೀರು ಹರಿಸಲಾಗುವುದು.
ಸೆಪ್ಟೆಂಬರ್ 11 ಕ್ಕೆ ಮತ್ತೊಂದು ಸಭೆ:
ಮುಂದಿನ ದಿನಗಳಲ್ಲಿ ಮಳೆಯ ಪರಿಸ್ಥಿತಿ ಹಾಗೂ ಜಲಾಶಯದ ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಸೆಪ್ಟೆಂಬರ್ 11 ರಂದು ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗುವುದು. ಮಳೆ ಚೆನ್ನಾಗಿ ಬಂದು ಜಲಾಶಯ ಭರ್ತಿಯಾಗಲಿ ಎಂದು ಆಶಿಸಿರುವ ಸಚಿವರು, ತಮ್ಮ ಸರ್ಕಾರ ಸದಾ ರೈತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

