Sun. Aug 9th, 2026

“ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಹೋಟೆಲ್ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್”: ಯು.ಟಿ. ಖಾದರ್ ಎಚ್ಚರಿಕೆ

Share this with Friends

ಬೆಂಗಳೂರು: “ಐಷಾರಾಮಿ ಹೋಟೆಲ್‌ಗಳೆಂದು ನಂಬಿ ಬರುವ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು,” ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಅತ್ಯಂತ ಕಠಿಣ ಸಂದೇಶ ನೀಡಿದ್ದಾರೆ.

ಸುದ್ದಿಗಾರರೊಂದೊಗೆ ಮಾತನಾಡಿದ ಅವರು,ರಾಜಧಾನಿಯ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ.ಈ ಮಹತ್ವದ ಕಾರ್ಯಾಚರಣೆಯ ವೇಳೆ ಬೆಂಗಳೂರಿನ ಸುಮಾರು 26 ಐಷಾರಾಮಿ ಹೋಟೆಲ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕರವಾದ 500 ಕೆಜಿಗೂ ಹೆಚ್ಚು ಕಳಪೆ ಗುಣಮಟ್ಟದ ಮಾಂಸ ಹಾಗೂ ಅವಧಿ ಮುಗಿದ ಅಶುದ್ಧ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದರು.

ಈ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಕೇವಲ ದಂಡ ವಿಧಿಸುವುದಕ್ಕೆ ಸೀಮಿತವಾಗದೆ ತಪ್ಪು ಮಾಡಿದವರನ್ನು ಜೈಲಿಗಟ್ಟಲಾಗುವುದು ಎಂದು ಗುಡುಗಿದ್ದಾರೆ.

ಲೈಸೆನ್ಸ್ ಶಾಶ್ವತ ರದ್ದು; ರಾಜ್ಯಾದ್ಯಂತ 30 ವಿಶೇಷ ತಂಡಗಳಿಂದ ಕಣ್ಗಾವಲು:

ಗ್ರಾಹಕರಿಗೆ ಸುರಕ್ಷಿತ ಮತ್ತು ಶುದ್ಧ ಆಹಾರ ನೀಡುವುದು ಪ್ರತಿಯೊಬ್ಬ ಉದ್ಯಮಿಯ ಆದ್ಯ ಕರ್ತವ್ಯ ಎಂದಿರುವ ಸಚಿವರು, ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ಉದ್ಯಮ ಪರವಾನಗಿಯನ್ನು (ಲೈಸೆನ್ಸ್) ತಕ್ಷಣವೇ ಶಾಶ್ವತವಾಗಿ ರದ್ದುಗೊಳಿಸಿ, ಅಂತಹ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಿಸಲು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಈ ಆಹಾರದ ಕಳಪೆ ಜಾಲದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಕಾರ್ಯಾಚರಣೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಆಹಾರದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು 30 ವಿಶೇಷ ಆಹಾರ ಸುರಕ್ಷತಾ ಕಣ್ಗಾವಲು ತಂಡಗಳನ್ನು ರಚಿಸಲಾಗಿದ್ದು, ಇವುಗಳು ಇಂದಿನಿಂದಲೇ ಪ್ರತಿಯೊಂದು ಹೋಟೆಲ್, ಬೇಕರಿ ಹಾಗೂ ಖಾನಾವಳಿಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಲಿವೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

 

 


Share this with Friends

Related Post