Fri. Oct 2nd, 2026

ಆರೋಪ ಸಾಬೀತುಪಡಿಸದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಬಿ.ವೈ. ವಿಜಯೇಂದ್ರ ಸವಾಲು

Share this with Friends

ಬೆಂಗಳೂರು: ಬಿಜೆಪಿ ವಿರುದ್ಧ ಮುಖ್ಯಮಂತ್ರಿಗಳು ಮಾಡಿರುವ ಮತದಾರರ ಪಟ್ಟಿ ಅಕ್ರಮದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಪಟ ನಾಟಕವಾಗಿದ್ದು, ಈ ಆರೋಪಗಳನ್ನು ಸಾಬೀತುಪಡಿಸದಿದ್ದರೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಯನ್ನೇ ರದ್ದುಗೊಳಿಸಿ ಚುನಾವಣಾ ಆಯೋಗದ ಎದುರು ಧರಣಿ ನಡೆಸಿರುವುದು ಕೇವಲ ರಾಜಕೀಯ ಗಿಮಿಕ್ ಮತ್ತು ಹಿಟ್ ಅಂಡ್ ರನ್ ತಂತ್ರ ಎಂದು ಟೀಕಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಅಕ್ರಮ ಮತದಾರರ ಸೇರ್ಪಡೆ ಆರೋಪ:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದಲೇ ಮತದಾರರ ಪಟ್ಟಿಗೆ ಹೊರರಾಜ್ಯದವರು ಮತ್ತು ಅಕ್ರಮ ಬಾಂಗ್ಲಾದೇಶಿಯರ ಹೆಸರನ್ನು ಸೇರಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಗಂಭೀರ ಆರೋಪ ಮಾಡಿದರು. “ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ಬರೋಬ್ಬರಿ 1.30 ಲಕ್ಷ ಮತದಾರರು ಅಸಹಜವಾಗಿ ಹೆಚ್ಚಾಗಿದ್ದಾರೆ. ಕೃಷ್ಣರಾಜ ಕ್ಷೇತ್ರ, ಬೆಂಗಳೂರಿನ ಶಾಂತಿನಗರ, ಶಿವಾಜಿನಗರ, ಕಲ್ಬುರ್ಗಿ ದಕ್ಷಿಣ ಹಾಗೂ ದಕ್ಷಿಣ ಕನ್ನಡದ ಗಡಿ ಭಾಗಗಳಲ್ಲಿ ಕೇರಳ ಮತ್ತು ಇತರ ಹೊರರಾಜ್ಯಗಳ ಜನರ ಹೆಸರುಗಳನ್ನು ಅಕ್ರಮವಾಗಿ ಸೇರಿಸಲಾಗಿದೆ” ಎಂದು ಅವರು ಅಂಕಿ-ಅಂಶಗಳನ್ನು ಮುಂದಿಟ್ಟರು.

ಸಾವಿರ ಎಫ್‌ಐಆರ್ ಹಾಕಿದರೂ ಹೆದರಲ್ಲ:

ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕಲಾಗುತ್ತಿದೆ. ಇಡೀ ರಾಜ್ಯವನ್ನು ‘ಎಫ್‌ಐಆರ್ ರಾಜ್ಯ’ ಮಾಡಲು ಮುಖ್ಯಮಂತ್ರಿಗಳು ಹೊರಟಿದ್ದಾರೆ. ಆದರೆ ಇಂತಹ ರಾಜಕೀಯ ದ್ವೇಷದ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ, ಸಾವಿರ ಪ್ರಕರಣಗಳನ್ನು ದಾಖಲಿಸಿದರೂ ನ್ಯಾಯಾಲಯದಲ್ಲೇ ಕಾನೂನುಬದ್ಧವಾಗಿ ಎದುರಿಸಲಿದ್ದೇವೆ ಎಂದು ಅವರು ಗುಡುಗಿದರು.

ಫಾರಂ 7 ಕಾನೂನುಬದ್ಧ ಹಕ್ಕು:

ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಎಆರ್‌ಒಗಳು ಇವರ ಕಪಿಮುಷ್ಟಿಯಲ್ಲೇ ಇದ್ದಾರೆ. ಹೀಗಿರುವಾಗ ಬಿಜೆಪಿ ವಿರುದ್ಧ ಗೂಬೆ ಕೂರಿಸುವುದು ಹಾಸ್ಯಾಸ್ಪದ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ನವೀಕರಣ ಹಾಗೂ ಪಾರದರ್ಶಕತೆಗಾಗಿ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಫಾರಂ 7 (Form 7) ಬಳಸಲು ಕಾನೂನುಬದ್ಧ ಅವಕಾಶ ನೀಡಿದೆ. ನಕಲಿ ಮತ್ತು ದ್ವಿಪ್ರತಿ ಮತಗಳನ್ನು ಮುಕ್ತಗೊಳಿಸಿ ಪಟ್ಟಿಯನ್ನು ಸ್ವಚ್ಛಗೊಳಿಸುವುದು ಆಯೋಗದ ಕರ್ತವ್ಯವಾಗಿದೆ. ಇದನ್ನು ಪ್ರಶ್ನಿಸುವ ನೈತಿಕತೆ ಮುಖ್ಯಮಂತ್ರಿಗಳಿಗಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

 


Share this with Friends

Related Post