ಧಾರವಾಡ: ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಜಗಳ, ಗಲಾಟೆ, ಹೋರಾಟ, ಯುದ್ಧ ನಡೆಯುತ್ತಿದೆ. ಯುದ್ಧ ಮಾಡುವವರು ಮನುಷ್ಯರನ್ನು ಅಂಕಿಯಾಗಿ ಪರಿವರ್ತಿಸಿದರೆ ದೇಹದಿಂದ ಹೃದಯವನ್ನು ತೆಗೆದಂತೆ. ಒಳ್ಳೆಯ ಭಾವನೆಗಳನ್ನು ನಮ್ಮ ಹೃದಯದಲ್ಲಿ ಸ್ಥಾಪನೆ ಮಾಡಲು ಮಠಗಳಿವೆ. ಸಂಸ್ಕಾರ ಇದೆ. ಭಕ್ತರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದ ಶ್ರೀ ಜಗದ್ಗುರು ಮೂರು ಸಾವಿರ ವಿರಕ್ತಮಠದ ಶ್ರೀ ಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಧರ್ಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಇತಿಹಾಸ ತಿಳಿದುಕೊಂಡವರು ಭವಿಷ್ಯ ನಿರ್ಮಾಣ ಮಾಡುತ್ತಾರೆ. ಇಂತಹ ಸ್ಥಳದಲ್ಲಿ ಬಂದಾಗ ಭಾಷಣ ಮಾಡಬೇಕೆಂದು ಭಾಷಣ ಮಾಡುವುದಲ್ಲ. ನಮ್ಮ ಭಾವನೆಗಳನ್ನು ನಾವು ಅಭಿವ್ಯಕ್ತ ಮಾಡಬೇಕು. ಉಪ್ಪಿನ ಬೆಟಗೇರಿ ಗ್ರಾಮ ಬಹಳ ದೊಡ್ಡ ಗ್ರಾಮ, ಇಲ್ಲಿ ಬಹಳಷ್ಟು ಜನ ಪ್ರಗತಿಪರ ರೈತರಿದ್ದಾರೆ. ದುಡಿಮೆಯನ್ನು ನಂಬಿದ್ದಾರೆ. ಕೃಷಿಯನ್ನೇ ನಂಬಿಕೊಂಡಿದ್ದಾರೆ. ಬದುಕಿನ ತಕ್ಕ ಹಾಗೆ ಮಠ, ಯಾವ ಮಠ ಬದುಕಿಗೆ ಸಂಬಧ ಇರುವುದಿಲ್ಲವೋ ಅಲ್ಲಿ ಭಕ್ತರೂ ಕೂಡ ಎಷ್ಟು ಬೇಕು ಅಷ್ಟೇ ಇರುತ್ತಾರೆ. ಜನರ ಬದುಕಿಗೆ ಮಾರ್ಗದರ್ಶನ ಕೊಡುವುದು ಜನರ ಬದುಕಿನಲ್ಲಿ ಮೌಲ್ಯಗಳನ್ನು ತುಂಬುವುದು ಜನರ ಬದುಕಿನಲ್ಲಿ ಸಾಕ್ಷಾತ್ಕಾರ ಪಡೆಯಲು ಮಾರ್ಗ ತೋರಿಸುವುದು ಆಧ್ಯಾತ್ಮಕ ಭಾವನೆ ತುಂಬುವ ಕೆಲಸ ಮಠಗಳು ಮಾಡುತ್ತವೆ. ಯಾವ ಮಠ ಜನರಿಗೆ ಹತ್ತಿರವಾಗಿ ಕೆಲಸ ಮಾಡುತ್ತದೆ ಅದು ನಮ್ಮ ಮಠವಾಗುತ್ತದೆ ಎಂದು ಹೇಳಿದರು.
ಗುರುಗಳ ಆಶೀರ್ವಾದ:
ನಮಗೆ ಯಾರೂ ಗುರುತು ಇಲ್ಲದಿರುವಾಗ ನನ್ನನ್ನು ಗುರುತಿಸಿರುವುದು ಉಪ್ಪಿನ ಬೆಟಗೇರಿ ಆಶೀರ್ವಾದ ಮಾಡಿರುವುದು ಇಲ್ಲಿನ ಮಠ, 1998 ರಲ್ಲಿ ನಾನು ಚುನಾವಣೆಗೆ ನಿಂತಾಗ ಉಪ್ಪಿನ ಬೆಟಗೇರಿ ಜನರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲ ಕೊಟ್ಟರು. ಆಗ 24 ಜನ ಗ್ರಾಮ ಪಂಚಾಯತಿ ಸದಸ್ಯರಿದ್ದರು. ಆ ಸಂದರ್ಭದಲ್ಲಿ ನಾನು ಮಠಕ್ಕೆ ಬಂದಿದ್ದೆ. ಸ್ವಾಮೀಜಿಗಳು ಜ್ಞಾನ ಮಂದಿರಕ್ಕೆ ಕರೆದುಕೊಂಡು ಹೋಗಿ ಒಂದು ರುದಾಕ್ಷಿ ಕೊಟ್ಟು. ನಿನ್ನ ಕಾಲು ಹಿಡಿದು ಎಳೆಯುವ ಜನ ಬಹಳ ಇದ್ದಾರೆ ನೀನು ನಂಬರ್ ಒನ್ ಆಗಿ ಗೆಲ್ಲುತ್ತಿ. ನೀನು ಗೆಲ್ಲಲಿ ಎಂದು ಪೂಜೆ ಮಾಡಿದ ಈ ರುದಾಕ್ಷಿ ಕೊಡುತ್ತಿದ್ದೇನೆ ಎಂದು ಕೊಟ್ಟರು. ಅತ್ಯಂತ ದೊಡ್ಡವರಿದ್ದವರೂ ನಿನ್ನ ಕಾಲು ಹಿಡಿದು ಎಳೆಯುವವರಿದ್ದಾರೆ ಎಂದು ಹೇಳಿದ್ದರು. ಅವರು ಹೇಳಿದ್ದು ಸತ್ಯವಾಯಿತು. ಅವತ್ತಿಂದ ನಾನು ಯಾವುದೇ ಚುನಾವಣೆ ಸೋತಿಲ್ಲ ಎಂದರು.
ಈ ಊರಿನ ಜನರಿಗೆ ಮಠದ ಮೇಲೆ ಇರುವ ಭಕ್ತಿ ಸದಾಕಾಲ ಸಾಯುವವರೆಗೂ ಚಿರಕಾಲ ಉಳಿದಿದೆ. ಗುರುಗಳು ನನಗೆ ಮಠಕ್ಕೆ ಅನುದಾನ ಎಂದೂ ಕೇಳಿಲ್ಲ. ನಾನು ಶಾಸಕನಾಗಿ ಮಂತ್ರಿ ಆದಾಗ ಕರೆ ಕಳಿಸಿದರು. ನಮ್ಮೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಆಗ ವಿ.ಪಿ. ಬಳಿಗಾರ ಅಂತ ಸಿಎಂ ಯಡಿಯೂರಪ್ಪ ಅವರ ಕಾರ್ಯದರ್ಶಿ ಇದ್ದರು. ಅವರೇ ಬಂದು ಯೋಜನೆ ರೂಪು ರೇಷೆ ಮಾಡಿ ಯೋಜನೆ ಜಾರಿ ಮಾಡಿದರು. ಗುರುಗಳ ಆಶೀರ್ವಾದದಿಂದ ಈ ಯೋಜನೆ ಜಾರಿಯಾಯಿತು. ಗುರುಗಳು ತಮ್ಮ ಸ್ವಂತಕ್ಕೆ ಕೇಳದೇ ಮಠಕ್ಕೆ ಕೇಳದೆ ಊರಿಗೆ ಕೇಳಿದರು. ಆದ್ದರಿಂದ ಈ ಮಠದ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ ಎಂದು ಹೇಳಿದರು.
ರಾಜಕಾರಣಿಗಳು ಅಧಿಕಾರ ಇದ್ದಾಗ ನಾ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ, ಆ ಸ್ಥಾನದಲ್ಲಿ ಕೂಡಿಸುವವರೆ ಇಲ್ಲಿದ್ದಾರೆ. ಬದುಕು ಬಹಳ ವಿಚಿತ್ರ ಇದೆ. ಹಾಸಿಗೆ ಇದ್ದವನಿಗೆ ನಿದ್ದೆ ಇಲ್ಲ. ನಿದ್ದೆ ಇರುವವನಿಗೆ ಹಾಸಿಗೆ ಇಲ್ಲ. ನಮ್ಮ ಹಿರಿಯರು ಜಮಖಾನ ಮೇಲೆ ನೆಮ್ಮದಿಯಿಂದ ಮಲಗುತ್ತಿದ್ದರು. ನಾನೂ ಜಮಖಾನ ಮೇಲೆ ಮಲಗುತ್ತೇನೆ. ಶ್ರೀಮಂತರಿಗೆ ದುಡಿದೆ ನಿದ್ದೆ ಇಲ್ಲ. ಕೆಲವರಿಗೆ ನೆಲಕ್ಕೆ ಒರಗಿದರೆ ನಿದ್ದೆ ಬರುತ್ತದೆ. ಅವರಿಗೆ ಹಾಸಿಗೆ ಇಲ್ಲ ಮೈ ಮುರಿದು ದುಡಿದರೆ ನಿದ್ದೆ ಬರುತ್ತದೆ. ಮೈ ಮುರಿದು ದುಡಿಯುವವರು ಜಾಣ್ಮೆಯಿಂದ ದುಡಿದರೆ ಹಾಸಿಗೆ ಖರೀದಿಸಲು ಹಣ ಸಿಗುತ್ತದೆ. ಅಂದರೆ ಇಬ್ಬರೂ ದುಡಿಯಬೇಕು. ಹಿಂದೆ ದುಡ್ಡೆ ದೊಡ್ಡಪ್ಪ ಅಂತ ಕಾಲ ಇತ್ತು. ಆದರೆ, ದುಡಿಮೆಯೇ ದೊಡ್ಡಪ್ಪ, ದುಡ್ಡು ಇವತ್ತು ಇರುತ್ತದೆ ನಾಳೆ ಹೋಗುತ್ತದೆ. ಹೊಲ ಮಾರಿದ ರೈತ ಎರಡು ವರ್ಷ ಅದ್ಧೂರಿ ಜೀವನ ಮಾಡುತ್ತಾನೆ. ಆದರೆ, ಹೊಲ ಇರುವ ರೈತ ನಿರಂತರ ದುಡಿಯುತ್ತಾನೆ. ಸದಾ ನೆಮ್ಮದೊಯಿಂದ ಇರುತ್ತಾನೆ. ನಮ್ಮದು ಕಾಯಕ ಸಮಾಜ, ಕಾಯಕ ತತ್ವ ಪ್ರಚಾರ ಮಾಡುವುದು ನಮ್ಮ ಸಿದ್ಧಾಂತ. ಬಸವಣ್ಣ ಕಾಯಕವೇ ಕೈಲಾಸ ಅಂದರು. ಅಂದರೆ ಪೂಜೆಗಿಂತ ಕಾಯಕ ದೊಡ್ಡದು. ಈ ಕಲ್ಪನೆ ವಿಶ್ವದಲ್ಲಿ ಯಾರೂ ಕೊಟ್ಟಿಲ್ಲ. ಕಾಯಕವನ್ನು ಸ್ವರ್ಗಕ್ಕೆ ಹೋಲಿಕೆ ಮಾಡಿರುವುದು ಬಸವಣ್ಣನ ವಿಚಾರ ಧಾರೆಯಾಗಿದೆ. ಬೇರೆ ಎಲ್ಲಿಯೂ ಇಲ್ಲ ಎಂದರು.
ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಜಗಳ, ಗಲಾಟೆ, ಹೋರಾಟ, ಯುದ್ಧ ನಡೆಯುತ್ತಿದೆ. ಈ ಧರ್ಮದ ಹೆಸರಿನಲ್ಲಿ ನಡೆಯಬಾರದು. ಯಾವದು ಸರಿ ಇದೆಯೋ ಸತ್ಯ ಇದೆಯೋ ಅದು ಧರ್ಮ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಯುದ್ಧಗಳು ನಡೆಯುತ್ತಿವೆ. ಬಸವಣ್ಣ ಅದಕ್ಕೆ ಮೊದಲೇ ಉತ್ತರ ನೀಡಿದ್ದಾರೆ. ದಯವೇ ಧರ್ಮದ ಮೂಲವಯ್ಯ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹೇಳಿದ್ದಾರೆ. ಅಲ್ಲಿಯೂ ಸಾಯುತ್ತಾರೆ. ಇಲ್ಲಿಯೂ ಸಾಯುತ್ತಾರೆ. ಯುದ್ಧ ಮಾಡುವವರಿಗೆ ಕೊಲ್ಲುವ ಸಂಖ್ಯೆ ಮುಖ್ಯವಾಗಿದೆ. ಪಾಣ ಕಳೆದುಕೊಂಡವರು ಮನುಷ್ಯರು ಎಂದು ಅವರಿಗೆ ಅರ್ಥವಾಗುತ್ತಿಲ್ಲ. ಮನುಷ್ಯರನ್ನು ಅಂಕಿಯಾಗಿ ಪರಿವರ್ತಸಿದರೆ ದೇಹದಿಂದ ಹೃದಯವನ್ನು ತೆಗೆದಂತೆ. ಅವರಿಗೆ ಭಾವನೆಗಳೆ ಇಲ್ಲ. ಆ ಭಾವನೆಗಳನ್ನು ನಮ್ಮ ಹೃದಯದಲ್ಲಿ ಸ್ಥಾಪನೆ ಮಾಡಲು ಮಠಗಳಿವೆ. ಸಂಸ್ಕಾರ ಇದೆ. ಭಕ್ತರಿದ್ದಾರೆ ಎಂದು ಹೇಳಿದರು.
ಮಾದರಿ ಮಠ:
ಉಪ್ಪಿನ ಬೆಟಗೇರಿ ಮಠ ಮಾಡುತ್ತಿರುವ ಕಾಯಕ ಎಲ್ಲ ಮಠಗಳಿಗೆ ಮಾದರಿಯಾಗಿದೆ. ಈ ಸಂಸ್ಕಾರ ಸಂಸ್ಕೃತಿ ಮುಂದುವರೆಸಿಕೊಂಡು ಹೋಗಬೇಕು. ತಾಳೆಯೇ ನಮ್ಮ ಶಕ್ತಿ ತಾಳೆಯೇ ನಮಗೆ ಆಧಾರ. ಶ್ರೀಮಠ ಹೇಳಿದಂತೆ ಮಾಡಿಕೊಂಡು ಹೋಗಿ, ಈ ಪರಂಪರೆ ಸದಾಕಾಲ ಮುಂದುವರೆಯಲಿ, ಎಲ್ಲಿವರೆಗೂ ಭಕ್ತಿ ಇದೆ. ಅಲ್ಲಿವರೆಗೂ ಮಠ, ಸಂಸ್ಕೃತಿ, ಸಂಸ್ಕಾರ, ನ್ಯಾಯ, ನೀತಿ, ಧರ್ಮ ಇರುತ್ತದೆ. ಮನುಷ್ಯರು ಮಾನವರಾಗುವಂತ ಮಠ ಇದಾಗಲಿ, ಕಾಮ, ಕ್ರೋಧ, ಮದ ಮತ್ಸರದಲ್ಲಿ ಸಿಲುಕಿಕೊಂಡಿರುವವರು ಮನುಷ್ಯರು. ನ್ಯಾಯ, ನೀತಿ ಧರ್ಮದಲ್ಲಿ ಸಿಲುಕಿಕೊಂಡವರು ಮಾನವರು. ಈ ಮಠದ ಮೇಲಿನ ಭಕ್ತಿ, ಪ್ರೀತಿ ಎಲ್ಲವೂ ಜೀವನದ ಕೊನೆವರೆಗೂ ಇರುತ್ತದೆ ಎಂದು ಹೇಳಿದರು.

