Fri. Jun 5th, 2026

ಚಾಮರಾಜಪೇಟೆಗೆ ಬಂದು ಹೇಳಿದರೆ ನಾನು ಸುಮ್ಮನಿರುತ್ತಿದ್ದೆನಾ?  ಮಲ್ಲಿಕಾರ್ಜುನ್ ಹೇಳಿಕೆಗೆ ಜಮೀರ್ ಪ್ರತಿಕ್ರಿಯೆ

Share this with Friends

ದಾವಣಗೆರೆ: ಕಳೆದ ಕೆಲವು ದಿನಗಳಿಂದ ಮುನಿಸಿನ ಸುದ್ದಿಯಲ್ಲಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರು, ದಾವಣಗೆರೆ ದಕ್ಷಿಣ ಉಪಚುನಾವಣೆಯ ಕಣದಲ್ಲಿ ಅಚ್ಚರಿಯ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಳೆಯ ಕಹಿ ಘಟನೆಗಳನ್ನು ಮರೆತ ಉಭಯ ನಾಯಕರು, ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಜಂಟಿಯಾಗಿ ಮತಬೇಟೆ ನಡೆಸಿದರು.

ಆತ್ಮೀಯ ಭೇಟಿ, ಭರ್ಜರಿ ಊಟ:

ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ನೇರವಾಗಿ ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಅಲ್ಲಿ ಮಧ್ಯಾಹ್ನದ ಭೋಜನ ಸವಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, “ನಾನು ಮತ್ತು ಮಲ್ಲಣ್ಣ ಹಳೆಯ ಸ್ನೇಹಿತರು. ಯಾವುದೋ ಒಂದು ಸಂದರ್ಭದಲ್ಲಿ ಅವರು ನನ್ನ ಪ್ರಚಾರದ ಬಗ್ಗೆ ಹೇಳಿಕೆ ನೀಡಿದ್ದರು, ಅದರಲ್ಲಿ ತಪ್ಪಿಲ್ಲ. ನಮ್ಮ ಸ್ನೇಹಕ್ಕೆ ಯಾವುದೇ ಧಕ್ಕೆ ಬಂದಿಲ್ಲ” ಅವರು ನನ್ನ ಕ್ಷೇತ್ರವಾದ ಚಾಮರಾಜಪೇಟೆಗೆ ಬಂದು ಟಿಕೆಟ್ ಬಗ್ಗೆ ಹೇಳಿದರೆ ನಾನು ಕೂಡ ಹಾಗೆಯೇ ಹೇಳಿರುತ್ತಿದ್ದೆ ಎಂದು ತಿಳಿಸಿದರು.

ಮಲ್ಲಿಕಾರ್ಜುನ್ ಪ್ರತಿಕ್ರಿಯೆ:

ಇದೇ ವೇಳೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, “ಜಮೀರ್ ಅವರು ನಮ್ಮ ಮಂತ್ರಿ ಮಂಡಲದ ಸದಸ್ಯರು ಮಾತ್ರವಲ್ಲ, ನನ್ನ ಅತ್ಯಾಪ್ತರು. ಅವರ ಜೊತೆ ನಾನು ಸದಾ ಏಕವಚನದಲ್ಲೇ ಮಾತನಾಡುವುದು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಚುನಾವಣೆ ಪ್ರಚಾರಕ್ಕಾಗಿ ಅವರು ಬಂದಿರುವುದು ನಮ್ಮ ಶಕ್ತಿಯನ್ನು ಹೆಚ್ಚಿಸಿದೆ” ಎಂದು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಪರ ಜಂಟಿ ಮತಯಾಚನೆ:

ಭೇಟಿಯ ನಂತರ ಇಬ್ಬರೂ ನಾಯಕರು ದಾವಣಗೆರೆಯ ವಿವಿಧ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಮುಸ್ಲಿಂ ಮತದಾರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಅವರ ಪ್ರವೇಶ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಗೊಂದಲಗಳನ್ನೆಲ್ಲ ಬದಿಗಿಟ್ಟು ಕಾಂಗ್ರೆಸ್ ನಾಯಕರು ಒಟ್ಟಾಗಿ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

 


Share this with Friends

Related Post