ಬೆಳಗಾವಿ: ಮೊಟ್ಟೆಯಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಹಾಗಾಗಿ ಮೊಟ್ಟೆ ಸೇವನೆ ಮಾಡುವವರು ಯಾವುದೇ ಆತಂಕವಿಲ್ಲದೆ ಮೊಟ್ಟೆ ಸೇವನೆ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ನಾಲ್ಕೈದು ದಿನಗಳ ಹಿಂದಿದ್ದ ನಿಮ್ಮೆಲ್ಲರ ಆತಂಕವನ್ನು ದೂರ ಮಾಡುವಂತಹ ವರದಿ ಬಂದಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂಬುದು ದೃಢಪಟ್ಟಿದೆ.ಮೊಟ್ಟೆಯಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳಿವೆ ಎಂಬ ಚರ್ಚೆ-ವದಂತಿ ಬಂದ ಹಿನ್ನೆಲೆಯಲ್ಲಿ ಹಲವು ಮೊಟ್ಟೆಗಳನ್ನು ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಅಂತಿಮವಾಗಿ ಎಲ್ಲರಿಗೂ ಸಮಾಧಾನ ತರುವಂತಹ ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ಮೊಟ್ಟೆಯಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳು ಇರುವ ಸಾಧ್ಯತೆಯಿಲ್ಲ ಎಂದು ವದಂತಿ ಕೇಳಿ ಬಂದಾಗಲೇ ಹೇಳಿದ್ದೆ, ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷಾ ವೇಳೆ ಕೂಡ ಅದು ಸಾಭೀತಾಗಿದೆ. ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆಯಿದೆ. ನಾಗರೀಕರು ನಿರ್ಭೀತಿಯಿಂದ ಮೊಟ್ಟೆಗಳ ಸೇವನೆ ಮಾಡಬಹುದು ಎಂದು ತಿಳಿಸಿದ್ದಾರೆ.

