Fri. Mar 6th, 2026

ಹೈಕಮಾಂಡ್ ನಿಂದ ಬುಲಾವ್ ಬಂದಾಗ ವರಿಷ್ಠರ ಭೇಟಿ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ಯಾವುದೇ ಕಾರಣಕ್ಕೂ ಕದ್ದುಮುಚ್ಚಿ ದೆಹಲಿಗೆ ತೆರಳುವುದು,ಹೈಕಮಾಂಡ್ ನಾಯಕರ ಭೇಟಿ ಮಾಡುವುದನ್ನು ಮಾಡುವುದಿಲ್ಲ, ನಮ್ಮ ಹೈಕಮಾಂಡ್ ನನಗೂ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಆಹ್ವಾನ ನೀಡಲಿದೆ ಆಗ ನಾವು ವರಿಷ್ಠರ ಭೇಟಿಗೆ ದೆಹಲಿಗೆ ತೆರಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ‌.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, “ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ” “ಯಾವಾಗಲೇ ದೆಹಲಿಗೆ ಹೋಗುವುದು ಇದ್ದರೆ ನಿಮಗೂ ತಿಳಿಸುತ್ತೇವೆ. ನಿಮಗೆ ತಿಳಿಸದೇ ಏನೂ ಮಾಡುವುದಿಲ್ಲ. ನಾನು ಕದ್ದುಮುಚ್ಚಿ ಹೋಗುವುದಿಲ್ಲ” ಎಂದರು.

“ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್ ನಲ್ಲಿ  ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.

ಮಂಗಳವಾರ ದೆಹಲಿಗೆ ಪ್ರಯಾಣ:

ದೆಹಲಿ ಪೊಲೀಸರ ವಿಚಾರಣೆಗೆ ಹಾಜರಾಗುವ ಬಗ್ಗೆ ಕೇಳಿದಾಗ, “ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಆಗ ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಅಂದು ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ಅಂದು ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುವೆ. ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆ” ಎಂದು ತಿಳಿಸಿದರು.

ನಾಗಸಾಧುಗಳು ಆಶೀರ್ವಾದ ಮಾಡಿರುವ ಬಗ್ಗೆ ಕೇಳಿದಾಗ, “ಅವರು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆ” ಎಂದು ತಿಳಿಸಿದರು.


Share this with Friends

Related Post