Fri. Mar 6th, 2026

ದ್ವೇಷ ಭಾಷಣ ನಿಯಂತ್ರಣ ಕಾನೂನಿನಡಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕ್ರಮ ಕೈಗೊಳ್ಳಿ: ಕಾರಜೋಳ

Share this with Friends

ಬೆಂಗಳೂರು: ರಾಜ್ಯ ಸರಕಾರ ದ್ವೇಷ ಭಾಷಣ ನಿಯಂತ್ರಣ ವಿಧೇಯಕವನ್ನು ಎರಡೂ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದು, ಆ ಕಾನೂನಿನಡಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲನೇ ಅಪರಾಧಿ ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾಜ್ಯದ ವಿಧಾನಪರಿಷತ್ತಿನಲ್ಲಿ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ ಅವಹೇಳಕಾರಿಯಾಗಿ ಮತ್ತು ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿದ್ದು ಖಂಡನೀಯ,  ದ್ವೇಷ ಭಾಷಣ ನಿಯಂತ್ರಣ ಕಾನೂನನ್ನು ಇವರ ಸರ್ಕಾರವೇ ಎರಡೂ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದೆ ಅದರಡಿ ಪ್ರಿಯಾಂಕ್ ಖರ್ಗೆ ಮೊದಲನೇ ಅಪರಾಧಿಯಾಗುತ್ತಾರೆ ಎಂದರು.

ಆಡಳಿತ- ವಿಪಕ್ಷದ ನಡುವೆ ಟೀಕೆ ಟಿಪ್ಪಣಿ ನಡೆಯುವುದು ಪ್ರಜಾಪ್ರಭುತ್ವದ ಸೌಂದರ್ಯ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಇರಬೇಕು. ಜನರ ಕಲ್ಯಾಣಕ್ಕಾಗಿ ಇರಬೇಕು. ವೈಯಕ್ತಿಕ ದ್ವೇಷದಿಂದ ಹಿರಿಯರನ್ನು ಅಪಮಾನ ಮಾಡುವ ಶಬ್ದ ಬಳಸುವುದು ಯೋಗ್ಯವಲ್ಲ; ತರವಲ್ಲ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಗುಲ್ಬರ್ಗ, ಹೈದರಾಬಾದ್‍ನಲ್ಲಿ ಒಂದು ನಾಣ್ಣುಡಿ ಇದೆ. ಸಣ್ಣ ಬಾಯೊಳಗೆ ದೊಡ್ಡ ಮಾತು (ಚೋಟಿ ಮುಹ್, ಬಡೀ ಬಾತ್) ಎಂಬರ್ಥವನ್ನು ಇದು ಕೊಡುತ್ತದೆ. ಈ ನಾಣ್ಣುಡಿ ಪ್ರಿಯಾಂಕ್ ಸಲುವಾಗಿಯೇ ಇದ್ದಂತಿದೆ. ಪ್ರಿಯಾಂಕ್ ಅವರೇ ನಿಮ್ಮ ತಂದೆಯವರು ರಾಜ್ಯದಲ್ಲಿ 50 ವರ್ಷ ರಾಜಕಾರಣ ಮಾಡಿದ್ದಾರೆ. ಅವರನ್ನು ನೋಡಿ ನೀವು ಕಲಿಯಬೇಕಿತ್ತು ಎಂದು ಕಿವಿಮಾತು ಹೇಳಿದರು.

ಪ್ರಿಯಾಂಕ್ ತಂದೆಯವರ ಹೆಸರು ಮಲ್ಲಿಕಾರ್ಜುನ ಇರದೇ ಹೋಗಿದ್ದರೆ, ಪ್ರಿಯಾಂಕ್ ಖರ್ಗೆಯನ್ನು ಯಾವೂರ ದಾಸಯ್ಯ ಎಂದು ಯಾರೂ ಕೇಳುತ್ತಿರಲಿಲ್ಲ.  ಅವರ ತಂದೆಯವರಿಗಾಗಿ ಅವರಿಗೆ ಗೌರವ ಸಿಕ್ಕಿದೆ. ಚಿಕ್ಕವರಾದರೂ ಅವರು ತಿದ್ದಿಕೊಳ್ಳಬೇಕಿದೆ. ಬಾಯ್ತಪ್ಪಿ ಮಾತನಾಡಿದ್ದರೆ ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಯಲಿ ಎಂದರು.


Share this with Friends

Related Post