Fri. Mar 6th, 2026

ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಬಿ.ವೈ.ವಿಜಯೇಂದ್ರ

Share this with Friends

ಬೆಂಗಳೂರು: ನಮ್ಮ ಸ್ವಯಂಕೃತ ಅಪರಾಧದಿಂದಾಗಿ ವಿಪಕ್ಷದಲ್ಲಿದ್ದೇವೆ. ನಾವ್ಯಾರೂ ಆತಂಕ ಪಡಬೇಕಿಲ್ಲ. ಯಾವಾಗ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ಬಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ರಾಜ್ಯದ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಹೆಚ್ಚಾಗಿದೆ. ಎಲ್ಲೆಡೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 2028ರಲ್ಲಿ ಅಥವಾ ನಾಳೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ 130-140 ಶಾಸಕರೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ಇದಕ್ಕಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ:

ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್‍ಡಿಎ ಸರಕಾರವು ಭ್ರಷ್ಟಾಚಾರರಹಿತ ಆಡಳಿತವನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ನೀಡುತ್ತಿದೆ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ. ಇವಿಎಂ ಇರಲಿ; ಬ್ಯಾಲೆಟ್ ಇರಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದರು.

ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರಂಥ ಶ್ರೇಷ್ಠರ ನಾಯಕತ್ವ ನಮಗೆ ಸಿಕ್ಕಿದೆ. ಮೋದಿ, ಅಮಿತ್ ಶಾ, ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ದಾಪುಗಾಲು ಹಾಕುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಾರೆ. ವಾಜಪೇಯಿ, ಮೋದಿ ಅಥವಾ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಾರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೋ ಅಂಥ ದೇಶದ್ರೋಹಿಗಳನ್ನು ಬಿಜೆಪಿ ವಿರೋಧಿಸುತ್ತದೆ ಅಷ್ಟೆ ಎಂದು ತಿಳಿಸಿದರು.


Share this with Friends

Related Post