Fri. Mar 6th, 2026

ದಾವಣಗೆರೆ ವಿದ್ಯಾಕಾಶಿಯಾಗಲು ಶಾಮನೂರು ಶಿವಶಂಕರಪ್ಪ ಕಾರಣ: ಸಿಎಂ

Share this with Friends

ದಾವಣಗೆರೆ:ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ.ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಕಾಟನ್ ಸಿಟಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಮಾಜಿ ಸಚಿವ ದಿ.ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.  ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಹಸ್ರಾರು ಬದುಕಿಗೆ ದಾರಿದೀಪವಾಗಿದ್ದರು. ಉದ್ಯಮಿಯಾಗೀ, ಕೈಗಾರಿಕೋದ್ಯಮಿಯಾಗೀ, ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿ, ರಾಜಕಾರಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರೆನಿಸಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು.

ಇಳಿವಯಸ್ಸಿನಲ್ಲಿಯೂ ಅತ್ಯಂತ ಕ್ರೀಯಾಶೀಲ:

ಶಾಮನೂರು ಶಿವಶಂಕರಪ್ಪ  ಅವರು ದೇಶ ಕಂಡಂತಹ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗೀ ಸುಧೀರ್ಘ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಜನ್ಮದಿನಾಚರಣೆಯಲ್ಲಿ  ಹಾಗೂ ದಾಲ್ ಮಿಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು, ಶ್ರೀಯುತರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಿತ್ತು. ಅವರ ಅಗಲಿಕೆಯಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಅತ್ಯಂತ ಕ್ರೀಯಾಶೀಲರಾಗಿದ್ದರು ಎಂದರು.

ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು. ಬಿಜಾಪುರದ ಅಕ್ಕಮಹಾದೇವಿ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ಬಸವಣ್ಣನವರ ಛಾಯಾಚಿತ್ರ ಕಡ್ಡಾಯಗೊಳಿಸುವ ತೀರ್ಮಾನವನ್ನು ಅಭಿನಂದಿಸಲು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಜನಮನ್ನಣೆಗೆ  ಪಾತ್ರರಾಗಿದ್ದ ನಾಯಕ:

ಅವರೊಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಬಲವಿಲ್ಲದಿದ್ದರೂ, ಆ ಕ್ಷೇತ್ರದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದರಲ್ಲದೇ, ಆರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಸದಾ ಚೈತನ್ಯಶೀಲರಾಗಿದ್ದ ಶಾಮನೂರು ಶಿವಶಂಕರಪ್ಪನವರು ಮುಂದಿನ ಚುನಾವಣೆಯಲ್ಲಿಯೂ ಭಾಗವಹಿಸುವ  ಹುರುಪನ್ನು ತೋರಿದ್ದರು. ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು ಎಂದರು.

ಕೊಡುಗೈದಾನಿ:

ಬಡವರು, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲು ಟ್ರಸ್ಟ್ ಮೂಲಕ ನೆರವಾಗುವ ಕೊಡುಗೈದಾನಿಯಾಗಿದ್ದರು. ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ, ಈ ನಡುವಿನ ಪಯಣದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಮುಖ್ಯ. ದು:ಖದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ನಿಜಕ್ಕೂ ಸಾರ್ಥಕ ಎಂದರು.


Share this with Friends

Related Post