ಬೆಂಗಳೂರು: ಜಿಬಿಎ ಚುನಾವಣೆಗೆ ಸ್ಪರ್ಧೆ ಮಾಡಲಿಚ್ಚಿಸುವ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಜನವರಿ 15 ನೇ ತಾರೀಕಿನ ಒಳಗೆ ಅರ್ಜಿ ಹಾಕುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದು,ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳು ಹಾಗು ಮಹಿಳಾ ಅಭ್ಯರ್ಥಿಗಳಿಗೆ 25 ಸಾವಿರ ನೀಡಿ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,”ಮೀಸಲಾತಿ ನಿಗದಿಯಾದ ಮೇಲೆ ಜಿಬಿಎ ಚುನಾವಣೆಗೆ ತಯಾರಿ ನಡೆಸಿದರಾಯಿತು ಎಂದುಕೊಂಡರೆ ನೀವುಗಳು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ಸಹ ಎಲ್ಲಾ ನಿಗದಿಯಾದಾಗ ಮಾಡುತ್ತೇನೆ ಎಂದರೆ ಈ ಡಿ.ಕೆ.ಶಿವಕುಮಾರ್ ನಿಮ್ಮನ್ನು ಗುರುತಿಸುವುದಿಲ್ಲ. ಇಂದಿನಿಂದ ಆಕಾಂಕ್ಷಿ ಅಭ್ಯರ್ಥಿಗಳ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದರು.
“ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ. ಹಣ ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ, ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ಖರ್ಚಾಗಲಿದೆ. ತಾಲ್ಲೂಕು ಕಚೇರಿಗಳ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಲ್ಲವೇ” ಎಂದರು.
“ಎಂಎಲ್ ಎ ಚುನಾವಣೆ ವೇಳೆ 2 ಲಕ್ಷ ಹಣ ನಿಗದಿ ಮಾಡಲಾಗಿತ್ತು. ಇದರಿಂದ 20 ಕೋಟಿ ಹಣ ಸಂಗ್ರಹವಾಯಿತು. ಇದರಿಂದ ಪಕ್ಷದ ಪರವಾಗಿ ಜಾಹಿರಾತು ನೀಡಲು ಸಾಧ್ಯವಾಯಿತು. ಮಹಿಳೆಯರಿಗೆ ರಿಯಾಯಿತಿ ಇಲ್ಲ. ಒಂದು ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ತಿಳಿದಿದೆ” ಎಂದರು.
ಮಹಿಳೆಯರಿಗೆ ಹಾಗೂ ಓಬಿಸಿಗಳಿಗೆ ರಿಯಾಯಿತಿ ನೀಡಿ ಎಂದು ಸಭಿಕರು ಕೂಗಿದ ವೇಳೆಯಲ್ಲಿ, “ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ, ಉಚಿತ ಬಸ್ ನೀಡಲಾಗುತ್ತಿದೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಹ ಓಬಿಸಿ, ಒಕ್ಕಲಿಗರು ಓಬಿಸಿ ಎಂದು ತಿಳಿದಿದೆಯೇ? ಲಿಂಗಾಯತರು ಓಬಿಸಿ, ಆದಾಯ ಇಲ್ಲದ ಬ್ರಾಹ್ಮಣರು ಓಬಿಸಿ” ಎಂದರು.
ಸಿಎಂ ಹಾಗೂ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ:
ಇದೇ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರಿಗೆ 25 ಸಾವಿರ ಇರಲಿ ಎಂದರು. ಆಗ ಡಿಸಿಎಂ ಶಿವಕುಮಾರ್ ಅವರು “ಸಿಎಂ ಹಾಗೂ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ ನಿಗದಿ ಮಾಡಲಾಗುತ್ತಿದೆ. ನಿಮ್ಮ ದುಡ್ಡು ನನಗೆ ಬೇಡ ಮುಂದಿನ ಜನವರಿ 15 ನೇ ತಾರೀಕಿನ ಒಳಗೆ ಅರ್ಜಿ ಹಾಕಬೇಕು. 369 ವಾರ್ಡ್ ಗಳಿಂದ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ 10 ಮಂದಿ ಮಹಿಳೆಯರಾದರೂ ಅರ್ಜಿ ಸಲ್ಲಿಕೆ ಮಾಡಬೇಕು. ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿರಬೇಕು. ಅಂತಹವರಿಗೆ ಪ್ರಾಮುಖ್ಯತೆ ನೀಡಲಾಗುವುದು” ಎಂದರು.
“ಯಾರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಾರೋ ಅವರಿಗೆ ಅವಕಾಶ. ಸಿದ್ದರಾಮಯ್ಯ, ಶಿವಕುಮಾರ್ ಹಿಂದೆ ತಿರುಗಿದರೆ ಅವಕಾಶವಿಲ್ಲ. ಕೆಲಸ ಮಾಡಿದವರಿಗೆ ಹೆಚ್ಚು ಆದ್ಯತೆ” ಎಂದರು.
“ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಹೆಗಲ ಮೇಲೆ ರಾಷ್ಟ್ರಧ್ವಜವಿದೆ. ಬಿಜೆಪಿಯವರಿಗೆ ಇದು ಸಾಧ್ಯವಿಲ್ಲ. ಒಬ್ಬ ಕಾರ್ಯಕರ್ತ ಸತ್ತರೆ ರಾಷ್ಟ್ರಧ್ವಜ ಪ್ರತಿನಿಧಿಸುವ ನೂಲನ್ನು ಹಾಕಿ ಗೌರವ ಸಲ್ಲಿಸುವ ಅವಕಾಶವಿದೆ. ತಳಮಟ್ಟದಲ್ಲಿ ನಾಯಕರನ್ನು ಸೃಷ್ಟಿ ಮಾಡಲು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅವಕಾಶ ನೀಡಿದೆ. ಇಲ್ಲಿ ಶೇ.50 ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲಾಗಿದೆ. ದೇಶದಾದ್ಯಂತ ಮಹಿಳೆಯರಿಗೆ ಶೇ33 ರಷ್ಟು ಮೀಸಲಾತಿ ನೀಡುವ ಬಿಲ್ ಅನ್ನು ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಂಡಿಸಲಾಯಿತು” ಎಂದರು.
ವಿದ್ಯಾರ್ಥಿ ಚುನಾವಣೆ ನಡೆಸುವ ಬಗ್ಗೆ ಸಮಿತಿ ರಚನೆ:
“ವಿದ್ಯಾರ್ಥಿ ಚುನಾವಣೆ ಹೇಗೆ ನಡೆಸಬೇಕು ಎಂದು ತೀರ್ಮಾನಿಸಲು ಹೊಸ ಸಮಿತಿ ರಚನೆ ಮಾಡಲಾಗಿದೆ. ಇದರಿಂದ ಹೊಸ ನಾಯಕರನ್ನು ಬೆಳಕಿಗೆ ತರಲಾಗುವುದು. ಶರಣ ಪ್ರಕಾಶ್ ಪಾಟೀಲ್, ಡಾ.ಸುಧಾಕರ್, ಸಲೀಂ ಅಹಮದ್, ಪುಟ್ಟಣ್ಣ, ಎನ್ ಎಸ್ ಯುಐ ಮಾಜಿ ಅಧ್ಯಕ್ಷರು, ಯುವ ಕಾಂಗ್ರೆಸ್ ಅಧ್ಯಕ್ಷರು ಹೀಗೆ ಒಂಬತ್ತು ಜನರ ಸಮಿತಿ ರಚನೆ ಮಾಡಲಾಗಿದೆ. ಇವರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ. ನಾವುಗಳು ಸಹ ಈ ಹಿಂದೆ ವಿದ್ಯಾರ್ಥಿ ಚುನಾವಣೆಗಳ ಮೂಲಕವೇ ರಾಜಕೀಯಕ್ಕೆ ಬಂದವರು. ಆನಂತರ ಗಲಾಟೆಗಳು ಹೆಚ್ಚಾದ ಕಾರಣಕ್ಕೆ ರಂಗನಾಥ್ ಅವರು ಇದನ್ನು ನಿಲ್ಲಿಸಿಬಿಟ್ಟರು. ಈಗ ಇದರ ಅವಶ್ಯಕತೆ ಹೆಚ್ಚು ಕಾಣುತ್ತಿದೆ” ಎಂದರು.

