Fri. Mar 6th, 2026

ರಾಜ್ಯದಲ್ಲಿ ಮಹಾರಾಷ್ಟ್ರ ಪೊಲೀಸರ ದಾಳಿ:ಸಿಎಂ,ಗೃಹ ಸಚಿವರ ರಾಜೀನಾಮೆಗೆ ಸಿ.ಎನ್. ಅಶ್ವತ್ ನಾರಾಯಣ ಆಗ್ರಹ

Share this with Friends

ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಗೆ ಗೊತ್ತಾಗುವ ವಿಷಯ ನಮ್ಮ ಪೊಲೀಸರಿಗೆ, ಸರಕಾರಕ್ಕೆ ಗೊತ್ತಾಗುವುದಿಲ್ಲ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಡ್ರಗ್ಸ್ ಮಾಫಿಯಾಗಳು ಆಡಳಿತದ ಮೇಲೆ ಪ್ರಭಾವ ಬೀರುವ ಹಂತಕ್ಕೆ ಬಂದಿವೆ ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಡಾ. ಅಶ್ವತ್ ನಾರಾಯಣ ಆಗ್ರಹಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳು ವ್ಯವಸ್ಥಿತವಾಗಿ ತಯಾರಾಗಿ, ಸಾಗಣೆ ಹಾಗೂ ಮಾರಾಟವಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. “ಇದು ಸಣ್ಣ ಮಟ್ಟದ ಸಮಸ್ಯೆಯಲ್ಲ. ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಾಲ ರಾಜ್ಯಾದ್ಯಂತ ವ್ಯಾಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಪೊಲೀಸರು ಬಂದು ಕಲಬುರಗಿಯಲ್ಲಿ, ಮೈಸೂರಿನಲ್ಲಿ ದಾಳಿ ನಡೆಸುತ್ತಿರುವುದು ನಮ್ಮ ಗೃಹ ಇಲಾಖೆಯ ಅಸಮರ್ಥತೆಯನ್ನು ತೋರಿಸುತ್ತದೆ. ಮಹಾರಾಷ್ಟ್ರ ಪೊಲೀಸರಿಗೆ ಗೊತ್ತಾಗುವ ವಿಷಯ ನಮ್ಮ ಪೊಲೀಸರಿಗೆ, ಸರಕಾರಕ್ಕೆ ಗೊತ್ತಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.

ನಾರ್ಕೋಟಿಕ್ಸ್ ವಿಭಾಗದ ಕಾರ್ಯವೈಖರಿ, ಇಂಟೆಲಿಜೆನ್ಸ್ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. “ಪೋಲೀಸ್ ಠಾಣೆಗಳು ಮತ್ತು ಹುದ್ದೆಗಳು ಮಾರಾಟಕ್ಕೆ ಇಟ್ಟಂತೆ ಆಗಿವೆ. ಇದರಿಂದ ಯುವಕರ ಭವಿಷ್ಯ ಸಂಪೂರ್ಣವಾಗಿ ನಾಶವಾಗುತ್ತಿದೆ” ಎಂದು ಹೇಳಿದರು.

ಪೊಲೀಸ್ ಇಲಾಖೆ, ಡಿಜಿಪಿ, ಗೃಹ ಸಚಿವರು ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ? ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಉಪ ಮುಖ್ಯಮಂತ್ರಿಗಳು ಯಾವಾಗ ಮುಖ್ಯಮಂತ್ರಿ ಕುರ್ಚಿ ಏರುತ್ತೇನೋ ಎಂದು ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದು, ಇಲಾಖೆಯನ್ನೇ ಮಾರಾಟಕ್ಕೆ ಇಟ್ಟುಬಿಟ್ಟಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಈ ಸರಕಾರದಿಂದ ನಾವು ಏನನನ್ನು ಬಯಸಬಹುದು? ಎಂದು ಪ್ರಶ್ನಿಸಿದರು.

ಅದೇ ರೀತಿ ಕೋಗಿಲು ಗ್ರಾಮದಲ್ಲಿ ನಡೆದ ಅಕ್ರಮ ಒತ್ತುವರಿ ತೆರವು ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಡೆ ದ್ವಂದ್ವಪೂರ್ಣವಾಗಿದೆ. “ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಾಗ ಧರ್ಮದ ಆಧಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ”. ಕೆಸಿ ವೇಣುಗೋಪಾಲ್ ಅವರ ಟ್ವೀಟ್ ಉಲ್ಲೇಖಿಸಿ, “ಇದು ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಸರ್ಕಾರ ಮಾನವೀಯತೆ ಮತ್ತು ಕಾನೂನು ಎರಡನ್ನೂ ಸಮತೋಲನವಾಗಿ ನಿರ್ವಹಿಸಲು ವಿಫಲವಾಗಿದೆ” ಎಂದರು.


Share this with Friends

Related Post