ಬೆಂಗಳೂರು: ಕೋಗಿಲು ಒಡಾವಣೆಯ ಸರ್ಕಾರಿ ಜಾಗದಲ್ಲಿ ಅನೇಕರು ತಮಗೆ ಬೇರೆ ಕಡೆ ಮನೆಗಳಿದ್ದರೂ ಇಲ್ಲಿ ಗುಡಿಸಲು ಹಾಕಿಕೊಂಡಿದ್ದರು ಅವರಿಗೆ ಸೂರು ನೀಡಲ್ಲ, ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೊ ಅವರಿಗೆ ಮಾತ್ರ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಉದ್ಯೋಗ ಅರಸಿ ಬಂದು ಇಲ್ಲಿ ವಾಸವಾಗಿದ್ದಾರೆ. ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೊ ಅವರಿಗೆ ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು. ಇದಕ್ಕೆ ಅವರು ಒಂದೂವರೆಯಿಂದ ಎರಡು ಲಕ್ಷ ಹಣ ಪಾವತಿಸಬೇಕು. ಇದಕ್ಕೆ ಸಾಲ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ ಎಂದರು.
ನಾವು ಮನೆ ನೀಡುವ ಮುನ್ನ, ಅವರು ಯಾರು, ಎಲ್ಲಿಂದ ಬಂದಿದ್ದಾರೆ ಎಂದೆಲ್ಲಾ ಆಧಾರ್ ಹಾಗೂ ಇತರೆ ದಾಖಲೆ ಪರಿಶೀಲಿಸುತ್ತೇವೆ. ಅಲ್ಲಿಯವರೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
“ಕೆ.ಸಿ. ವೇಣುಗೋಪಾಲ್ ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ನಮಗೆ ಅನೇಕ ವಿಚಾರಗಳ ಬಗ್ಗೆ ಸಲಹೆ ನೀಡಿದ್ದಾರೆ, ಆದರೆ ಅವರು ಎಂದಿಗೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ”. “ಅವರು ನಮ್ಮ ನಾಯಕರು, ನಮಗೆ ಸಲಹೆ ನೀಡುವ ಎಲ್ಲಾ ಅಧಿಕಾರ ಅವರಿಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ಸಲಹೆ ನೀಡುತ್ತಾರೆ. ಈ ಹಿಂದೆಯೂ ಅನೇಕ ಸಲಹೆ ನೀಡಿದ್ದಾರೆ, ಈಗಲೂ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ” ಎಂದು ತಿಳಿಸಿದರು.

