ಬೆಂಗಳೂರು: ಒಡಂಬಡಿಕೆಯೊಂದಿಗೆ ನೀಡಲಾಗುತ್ತಿರುವ 108 ಆಂಬ್ಯುಲೆನ್ಸ್ ಸೇವೆಯನ್ನು ಸಧ್ಯದಲ್ಲೇ ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡಲಿದೆ ಇದಕ್ಕೆ ಬೇಕಾದ ತಂತ್ರಜ್ಞಾನ, ಕಮಾಂಡ್ ಕಂಟ್ರೋಲ್ ಸೆಂಟರ್, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
108-ಆರೋಗ್ಯ ಕವಚ ನಿರ್ವಹಣೆಗೆ ವಾರ್ಷಿಕ ರೂ. 162.40 ಕೋಟಿ ಅನುದಾನ ಅಗತ್ಯವಿದ್ದು, ಸರ್ಕಾರದಿಂದ ರೂ.180.00 ಕೋಟಿಗಳ ಅನುದಾನವು 108-ಆರೋಗ್ಯ ಕವಚ ಲೆಕ್ಕ ಶೀರ್ಷಿಕೆಯಡಿಯಲ್ಲಿ ಅನುಮೋದನೆಯಾಗಿದ್ದು, ನಿಯಮಿತ ಸಮಯದಲ್ಲಿ ಅನುದಾನ ಬಿಡುಗಡೆ ಸಹ ಆಗಿದೆ. ಹಾಲಿ ಇರುವ 108-ಆರೋಗ್ಯ ಕವಚ ಸೇವೆಯ ಸೇವಾದಾರರಿಂದ ಸರ್ಕಾರ ವಹಿಸಿಕೊಳ್ಳುವ ಸಮಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇದ್ದರೂ, ಸಾರ್ವಜನಿಕರ ಸೇವೆಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಇದು ತುರ್ತು ಆರೋಗ್ಯ ಸೇವೆಯಾಗಿರುವುದಿರಂದ ಇಲಾಖೆಯು ಸದಾ ಜಾಗರೂಕತೆಯಿಂದ ನಿರ್ವಹಣೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಒಟ್ಟಾರೆ 1841 ಆಂಬ್ಯುಲೆನ್ಸ್ ಲಭ್ಯವಿದ್ದು, ಇದರಲ್ಲಿ 108-ಆರೋಗ್ಯ ಕವಚ ಕಾರ್ಯಕ್ರಮದಡಿಯಲ್ಲಿ ಒಟ್ಟು 715 ಆಂಬ್ಯುಲೆನ್ಸ್‌ಗಳು ಹಾಗೂ ರಾಜ್ಯ ವಲಯದ 1126 ಆಂಬ್ಯುಲೆನ್ಸ್‌ಗಳು ಲಭ್ಯವಿದೆ. ಮಾನದಂಡಗಳನ್ವಯ ಹಾಲಿ ಜನಸಂಖ್ಯೆಗೆ 813 ಆಂಬ್ಯುಲೆನ್ಸ್‌ಗಳು ಅಗತ್ಯವಿದ್ದು, ಇತರೆ ಇಲಾಖೆಯ ಆಂಬ್ಯುಲೆನ್ಸ್‌ಗಳನ್ನು ಹೊರತುಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳಡಿಯಲ್ಲಿ 1841 ಆಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಪ್ರಸ್ತುತ 108 – ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯನ್ನು ಒಡಂಬಡಿಕೆ ಮಾದರಿಯಲ್ಲಿ ನಿರ್ವಹಣೆ ಮಾಡುತ್ತಿದ್ದು, ಸೇವೆಯ ಕುರಿತು ಸಾರ್ವಜನಿಕರಿಂದ ಹಲವಾರು ಆಕ್ಷೇಪಣೆಗಳು, ಸಮಸ್ಯೆಗಳು ದಾಖಲಾಗಿದ್ದರಿಂದ, ಸನ್ಮಾನ್ಯ ಮುಖ್ಯಮಂತ್ರಿಗಳು 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಸರ್ಕಾರದ ವತಿಯಿಂದಲೇ ಆರೋಗ್ಯ ಕವಚ-108 ನಿರ್ವಹಣೆ ಮಾಡಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದೆ. ಅವಶ್ಯಕವಾದ ತಂತ್ರಜ್ಞಾನ, ಕಮಾಂಡ್ ಕಂಟ್ರೋಲ್ ಸೆಂಟರ್, ಅದಕ್ಕೆ ಬೇಕಾದ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ಸಿದ್ಧತೆಗಳು ಅಂತಿಮ ಹಂತ ತಲುಪಿದೆ. ಸದ್ಯದಲ್ಲಿಯೇ ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಆಂಬ್ಯುಲೆನ್ಸ್ ಸೇವೆ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

