Fri. Mar 6th, 2026

ಕೋಗಿಲು ಕ್ರಾಸ್ ಒತ್ತುವರಿದಾರರಿಗೆ ತರಾತುರಿಯಲ್ಲಿ ಮನೆ ಕೊಟ್ಟರೆ ಕಾನೂನು ಹೋರಾಟ:ಎಸ್.ಆರ್ ವಿಶ್ವನಾಥ್ ಎಚ್ಚರಿಕೆ

Share this with Friends

ಬೆಂಗಳೂರು:ಪೂರ್ವಾಪರ ಯೋಚಿಸದೆ ರಾಜ್ಯ ಸರಕಾರ ಕೋಗಿಲು ಅಕ್ರಮ ಮನೆ- ಗುಡಿಸಲುಗಳ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ತರಾತುರಿಯಲ್ಲಿ ಮನೆ ಕೊಟ್ಟರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ರಾಜ್ಯಪಾಲರಿಗೂ ಈ ಸಂಬಂಧ ಮನವಿ ಕೊಡುತ್ತೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಇಂದು ಸತ್ಯಾಸತ್ಯತೆ ಸಮಿತಿ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರಿ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು ಅಕ್ರಮವಲ್ಲವೇ? ಅಲ್ಲಿ ಮನೆ ಕಟ್ಟಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿತ್ತು. ವಿದ್ಯುತ್ ಸಂಪರ್ಕ ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತು ಅದನ್ನೆಲ್ಲಾ ಬಿಟ್ಟು ಸರ್ಕಾರ ನೇರವಾಗಿ ಮನೆ ಹಂಚಿಕೆ ಮಾಡಲು ಹೊರಟಿದೆ ಒಂದು ವೇಳೆ ಸರಕಾರ ತರಾತುರಿಯಲ್ಲಿ ಮನೆ ಕೊಟ್ಟರೆ ಅದನ್ನ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ,ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನನ್ನ ಕ್ಷೇತ್ರದಲ್ಲೂ ಮನೆಗಳು ನಿರ್ಮಾಣ ಹಂತದಲ್ಲಿವೆ. ಆರು ವರ್ಷಗಳ ಹಿಂದೆ 1 ಲಕ್ಷ ಹಣ ಕಟ್ಟಿದವರಿಗೆ ಮನೆ ಕೊಟ್ಟಿಲ್ಲ. 3 ಲಕ್ಷ ಆದಾಯ ಬೇಕು; ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಕೊಡಲು ಬೆಂಗಳೂರು ನಗರದಲ್ಲಿ 5 ವರ್ಷ ವಾಸವಾಗಿರುವ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯಿಂದ ಕೊಡಬೇಕಾಗುತ್ತದೆ. ಅಧಿಕಾರಿಗಳು ಅಂಥ ದೃಢೀಕರಣ ಪತ್ರವನ್ನು ನೀಡಿದರೆ ಅದು ಕಾನೂನಿಗೆ ವಿರುದ್ಧ ಆಗಲಿದೆ ಎಂದು ತಿಳಿಸಿದರು.

ಬೈಯಪ್ಪನಹಳ್ಳಿಯಲ್ಲಿ 14 ಮಹಡಿ ಇರುವ ಮನೆ ನಿರ್ಮಾಣ ನಡೆದಿದೆ. ಆನ್‍ಲೈನ್‍ನಲ್ಲಿ ಶೇ 50 ಮನೆಗಳ ಮಂಜೂರಾತಿ ನಡೆದಿದೆ. ಶಾಸಕರು ನೀಡುವ ಶೇ 50 ಮನೆಗಳನ್ನು ಇನ್ನೂ ನೀಡಿಲ್ಲ ಎಂದರು. 6 ವರ್ಷದಿಂದ ಕಾಯುವವರಿಗೆ ಮನೆ ಕೊಟ್ಟಿಲ್ಲ; ವಾರದಲ್ಲಿ ಮನೆ ಇಲ್ಲದವರಿಗೆ ಮನೆ ಕೊಡಲು ಹೇಗೆ ಸಾಧ್ಯ? ಇದು ಅಕ್ರಮವಾಗಿ ಮನೆ ಕೊಟ್ಟಂತಾಗುತ್ತದೆ ಎಂದು ಆಕ್ಷೇಪಿಸಿದರು.

ಕೋಗಿಲುವಿನಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಕುರಿತು ಸತ್ಯಾಸತ್ಯತೆ ತಿಳಿಯಲು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು 5 ಜನರ ಸಮಿತಿ ರಚಿಸಿದ್ದಾರೆ. ಅದರ ಮೊದಲ ಸಭೆ ಇಂದು ನಡೆದಿದೆ. ಸ್ಥಳ ಪರಿಶೀಲನೆಯನ್ನೂ ಮಾಡಲಿದ್ದೇವೆ ಎಂದು ತಿಳಿಸಿದರು. ಅಲ್ಲಿನ ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ. ಒಂದು ವಾರದಲ್ಲಿ ಈ ಸಂಬಂಧ ರಾಜ್ಯಾಧ್ಯಕ್ಷರಿಗೆ ವರದಿ ಕೊಡುವುದಾಗಿ ಹೇಳಿದರು.

ಕೋಗಿಲು ಅಕ್ರಮ ಮನೆ- ಗುಡಿಸಲುಗಳ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ಮನೆ ನೀಡಲು ಮುಂದಾದ ಸರಕಾರದ ಕ್ರಮದ ವಿರುದ್ಧ ಇದೇ 5ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್  ತಿಳಿಸಿದರು.


Share this with Friends

Related Post