ಬೆಂಗಳೂರು:ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಲ್ಲಿಸುವ ಅರ್ಜಿಗಳನ್ನು ನಿಯಮಗಳ ಅನ್ವಯ ಪರಿಶೀಲಿಸಿ ನಮೂನೆಗಳನ್ನು ವಿತರಿಸಲು ಕ್ರಮವಹಿಸಲಾಗುತ್ತಿದ್ದು, ವಿವಿಧ ತಂತ್ರಾಂಶಗಳೊಂದಿಗೆ ಇದರ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು ಅದನ್ನು ಪರಿಹರಿಸಲಾಗುತ್ತಿದೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರನ್ನು ಕೋರಿದ್ದಾರೆ.
ಸೇವಾ ನ್ಯೂನತೆಯಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿರಯವುದನ್ನು ಗಮನಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು,ಇ-ಸ್ವತ್ತು 2.0 ತಂತ್ರಾಂಶವನ್ನು ʼಭೂಮಿʼ, ʼಕಾವೇರಿʼ ʼಪಂಚತಂತ್ರʼ ʼಮೋಜಿಣಿʼ ಹಾಗೂ ಎಸ್ಕಾಂಗಳ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿರುತ್ತದೆ. ಸದರಿ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು/API ಸಮಸ್ಯೆಗಳು ಉಂಟಾಗಿದೆ ಹಾಗಾಗಿ ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿ (9483476000) ಪ್ರಾರಂಭಿಸಲಾಗಿದ್ದು, ಪ್ರತಿದಿನ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಸಹಾಯ ವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಮತ್ತೊಮ್ಮೆ ಪುನಶ್ಚೇತನ ತರಬೇತಿಯನ್ನು ಆಯೊಜೀಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇ-ಸ್ವತ್ತು ಆನ್‌ಲೈನ್ ಅರ್ಜಿಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುತ್ತಿದೆ. ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಾರ್ವಜನಿಕ ಪೋರ್ಟಲ್ ಮೂಲಕ ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಗಳ ಅರ್ಜಿ, ತೆರಿಗೆ ವ್ಯಾಪ್ತಿಯಿಂದ ಹೊರಗಿನ ಆಸ್ತಿಗಳ ಅರ್ಜಿ, ನಮೂನೆ-11 ಎ/ 11ಬಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಹೊಸ ಬಡವಾಣೆ ಮತ್ತು ಬಹುಮಹಡಿ (ಅಪಾರ್ಟ್ಮೆಂಟ್) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಇ-ಸ್ವತ್ತು 2.0 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

