Fri. Mar 6th, 2026

ಮತ್ತೆ ಬಳ್ಳಾರಿಯಲ್ಲಿ ಅವರ ರಿಪಬ್ಲಿಕ್ ತರಲು ಅವಕಾಶ ನೀಡಲ್ಲ:ಡಿಸಿಎಂ

Share this with Friends

ಬೆಂಗಳೂರು: ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಅವರು ಪ್ರಯತ್ನಿಸುತ್ತಿದ್ದಾರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಬಳ್ಳಾರಿ ಘಟನೆ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ನಮ್ಮ ಶಾಸಕ ಭರತ್ ರೆಡ್ಡಿಗೆ ಬೆಂಬಲವಾಗಿಯೇ ಇರಲಿದೆ,ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,“ಪಕ್ಷದ ವತಿಯಿಂದ ಈ ಘಟನೆ ಬಗ್ಗೆ ಅಧ್ಯಯನ ನಡೆಸಲು ಹೆಚ್.ಎಂ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ನಿಯೋಗ ಕಳುಹಿಸಿದ್ದೇವೆ. ಬಿಜೆಪಿಯವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ತಬ್ಬಾಡುತ್ತಿದ್ದಾರೆ. ಅವರ ನಡುವೆ ಏನೇನೂ, ಎಷ್ಟಿದೆ ಎಂಬುದು ಗೊತ್ತಿದೆ. ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಪ್ರಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಜನಾರ್ದನ ರೆಡ್ಡಿ ಅವರು ಅಲ್ಲಿಗೆ ಬರುವವರೆಗೂ ಅಲ್ಲಿ ಒಂದೇ ಒಂದು ಗಲಾಟೆ ನಡೆದಿರಲಿಲ್ಲ.” ಸಣ್ಣ ಅಹಿತಕರ ಘಟನೆ ಆಗಿರಲಿಲ್ಲ. ಸಣ್ಣ ಎಫ್ಐಆರ್ ಇರಲಿಲ್ಲ. ಅವರು ಬಂದಮೇಲೆ ಗಲಭೆ ಆಗಿದೆ. ಹೀಗಾಗಿ ಅವರಿಗೆ ಮಾತನಾಡುವ ಹಕ್ಕಿಲ್ಲ ಎಂದರು.

“ಈ ಪ್ರಕರಣದ ಬೆನ್ನಲ್ಲೇ ಎಲ್ಲಾ ಖಾಸಗಿ ಗನ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗನ್ ವಿತರಣೆ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಿದ್ಧಪಡಿಸಿ, ನಿಯಮಾವಳಿ ರೂಪಿಸುತ್ತೇವೆ” ಎಂದು ತಿಳಿಸಿದರು.

“ಮೊದಲ ಬಾರಿಗೆ ಬಳ್ಳಾರಿಯಲ್ಲಿ ನಮ್ಮ ಸರ್ಕಾರ ವಾಲ್ಮೀಕಿ ಮಹರ್ಷಿಯವರ ಪುತ್ಥಳಿ ನಿರ್ಮಿಸುತ್ತಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಗರದ ಎಲ್ಲೆಡೆ ಅದರ ಪೋಸ್ಟರ್ ಗಳನ್ನು ಹಾಕಿದ್ದಾರೆ. ಅದರಲ್ಲಿ ತಪ್ಪೇನಿದೆ? ನಮ್ಮ ಮನೆ ಮುಂದೆಯೂ ಬಿಜೆಪಿಯವರು ಪೋಸ್ಟರ್ ಹಾಕುತ್ತಿರುತ್ತಾರೆ. ಅದನ್ನು ನಾನು ಬೇಡ ಎನ್ನಲು ಸಾಧ್ಯವೇ? ಈ ಪೋಸ್ಟರ್ ಹಾಕುವುದರಿಂದ ಬಿಜೆಪಿಯವರಿಗೆ ಆಗಿರುವ ತೊಂದರೆ ಆದರೂ ಏನು? ಅವರು ಸರ್ಕಾರಿ ಜಾಗದಲ್ಲಿ ಹಾಕಿದ್ದಾರೆ? ಇದರಲ್ಲಿ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು ಮುಖ್ಯ:

ಎಸ್ಪಿ ಸೇರಿದಂತೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಕೇಳಿದಾಗ, “ನನಗೆ ಈ ಘಟನೆ ತಿಳಿದ ತಕ್ಷಣೆ ಎಸ್ಪಿ ಜೊತೆ ಮಾತನಾಡಿದ್ದೇನೆ. ಎಸ್ಪಿ ಯಾವ ಪರಿಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನ್ನ ಅನುಭವಕ್ಕೇ ಬಂದಿದೆ. ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಗೊತ್ತಿದೆ. ಈ ಹಿಂದೆ ಇದ್ದ ಎಸ್ಪಿ, ಐಜಿ ಮತ್ತು ಶಾಸಕರ ಜತೆಗೂ ಮಾತನಾಡಿದ್ದೇನೆ. ಬೇರೆ ನಾಯಕರ ಜತೆಗೂ ಮಾತನಾಡಿದ್ದೇನೆ. ಶ್ರೀರಾಮುಲು ಕೂಡ ನನಗೆ ಕರೆ ಮಾಡಿ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ತಕ್ಷಣವೇ ಪೊಲೀಸರಿಗೆ ಎಚ್ಚರಿಸಿದ್ದೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ. ಶಾಂತಿ ನೆಲೆಸುವುದು ಬಹಳ ಮುಖ್ಯ. ಬಳ್ಳಾರಿಯ ಜನ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದುಕೊಂಡಿದ್ದರು. ನಮಗೆ ಅದು ಮುಖ್ಯ. ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನದೇ ಆದ ಜವಾಬ್ದಾರಿ ಇದೆ” ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಕೋಟೆ ನಿರ್ಮಿಸಿಕೊಂಡವರನ್ನು ಯಾರು ತಾನೇ ಕೊಲ್ಲಲು ಹೋಗುತ್ತಾರೆ?:

ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಡ್ರಾಮಾ ಮಾಸ್ಟರ್. ಅವರು ಮೊದಲೇ ಸಿನಿಮಾ ನಿರ್ಮಾಪಕರಲ್ಲವೇ? ಡ್ರಾಮಾ ಮಾಡುತ್ತಾರೆ. ಕೋಟೆ ನಿರ್ಮಿಸಿಕೊಂಡು ನೂರು ಜನ ಭದ್ರತಾ ಸಿಬ್ಬಂದಿ ಹೊಂದಿರುವವರನ್ನು ಯಾರು ಹತ್ಯೆ ಮಾಡುತ್ತಾರೆ? ಬದಲಿಗೆ ಜನರಿಗೆ ಬೇರೆಯದೇ ರೀತಿಯ ಭಯವಿದೆ. ಜನಾರ್ಧನ ರೆಡ್ಡಿ ಅವರ ಕುಟುಂಬದವರಿಗೆ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರ ಇತಿಹಾಸ ಏನಿದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು” ಎಂದು ತಿರುಗೇಟು ನೀಡಿದರು.


Share this with Friends

Related Post