Fri. Mar 6th, 2026

ಮನರೇಗಾ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆ ನಡೆಸಿ: ಡಿಸಿಎಂ ಸವಾಲು

Share this with Friends

ಬೆಂಗಳೂರು:ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನಿರಾಧಾರ ಆರೋಪ ಮಾಡಿದ್ದಾರೆ ಒಂದು ವೇಳೆ ಅವರ ಆರೋಪ ನಿಜವೇ ಆಗಿದ್ದಲ್ಲಿ ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೇರ ಸವಾಲೆಸೆದಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಈ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಸಿಬಿಐ ತನಿಖೆಗೆ ನೀಡಲಿ. ಅದು ಎಷ್ಟೇ ಕೋಟಿ ಅವ್ಯವಹಾರವಾದರೂ ತಾಕತ್ತಿದ್ದರೆ ತನಿಖೆ ಮಾಡಿಸಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯಾವುದೇ ನಾಯಕರು ಇಂತಹ ಆರೋಪ ಮಾಡಲು ಸಾಧ್ಯವಿಲ್ಲ, ಅವರು ನಿಜವಾಗಿಯೂ ಈ ರೀತಿ ಹೇಳಿದ್ದಾರಾ?”ಹೇಳಿದ್ದರೆ ತನಿಖೆಗೆ ಮುಂದಾಗಲಿ ಎಂದು ತಿಳಿಸಿದರು.

ಯುಪಿಎ ಸರ್ಕಾರದ ಅವಧಿಯ ಮನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂಬ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು, “ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಅಥವಾ ಪ್ರಹ್ಲಾದ್ ಜೋಷಿ, ಈ ಮೂವರಲ್ಲಿ ಯಾರಾದರೂ ಒಬ್ಬರು ಮಾಧ್ಯಮ ವೇದಿಕೆ ಮೇಲೆ ಚರ್ಚೆಗೆ ಬರಲಿ. ನಾನು ಈ ವಿಚಾರವಾಗಿ ಚರ್ಚೆ ಮಾಡಲು ಸಿದ್ಧನಿದ್ದೇನೆ. “ಮನರೇಗಾ ಯೋಜನೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆಯೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಬಹಿರಂಗ ಚರ್ಚೆಗೆ ಬರಲಿ. ಆ ಮೂಲಕ ಜನರಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಬಹುದು”ಎಂದು ಸವಾಲೆಸೆದರು.

ಮನರೇಗಾ ಉಳಿಸಲು 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಳಿದಾಗ, “2 ದಿನ ವಿಶೇಷ ಅಧಿವೇಶನ ಕರೆದು ಈ ವಿಚಾರವಾಗಿ ಸಂಪೂರ್ಣ ಚರ್ಚೆ ಮಾಡಲಾಗುವುದು. ಬಿಜೆಪಿಯವರು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಅಭಿಯಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳಲಿ, ಈ ಕಾರ್ಯಕ್ರಮದಿಂದ ಏನೆಲ್ಲಾ ಕೆಟ್ಟ ಪರಿಣಾಮ ಬೀರಲಿದೆ ಎಂದು ನಾವು ಹೇಳುತ್ತೇವೆ” ಎಂದು ತಿಳಿಸಿದರು.

ಕೇರಳದ ಮಲೆಯಾಳಂ ಭಾಷೆ ಬಿಲ್ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನನಗೆ ಇನ್ನು ಸಂಪೂರ್ಣ ಮಾಹಿತಿ ಇಲ್ಲ” ಎಂದು ತಿಳಿಸಿದರು.

ನಿಮಗೆ ಸಿಕ್ಕಿರುವ ಅಧಿಕಾರ ನಮಗೆ ಸಿಕ್ಕಿಲ್ಲ ಎಂಬ ಕುಮಾರಸ್ವಾಮಿ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ಬಹಳ ಸಂತೋಷ, ಅವರು ಖುಷಿಯಾಗಿ ಸಂತೋಷವಾಗಿರಲಿ” ಎಂದರು.ಡಿಸಿಎಂ ಆದ ತಕ್ಷಣ ವಿಶೇಷ ಕೊಂಬು ಇರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅವರ ಶಾಸಕರುಗಳು ಇದ್ದಾರಲ್ಲಾ ಅವರ ಮೂಲಕ ಈ ವಿಚಾರವನ್ನು ಚರ್ಚೆ ಮಾಡಲು ಹೇಳಲಿ” ಎಂದು ಹೇಳಿದರು.


Share this with Friends

Related Post