ಬೆಂಗಳೂರು,ಫೆ.29: ವಿಧಾನಸಭೆ ಕಲಾಪದಲ್ಲಿ ಇಂದೂ ಕೂಡ ಪಾಕಿಸ್ತಾನ ಜಿಂದಾಬಾದ್’ ಪ್ರಕರಣ ಸದ್ದು ಮಾಡಿತು.
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ,ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಿ ಎಂದು ಆಗ್ರಹಿಸಿ ಗದ್ದಲ ಸೃಷ್ಟಿಸಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸರ್ಕಾರ ಯಾರನ್ನೂ ಬಂಧಿಸಿಲ್ಲ, ನಾಸೀರ್ ಹುಸೇನ್ ವಿಚಾರಣೆ ಸಹ ಮಾಡಿಲ್ಲ,ಜನತೆಗೆ ಏನು ಸಂದೇಶ ಕೊಡಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ವಿಧಾನಸೌಧ ಉಗ್ರರ ತಾಣ ಆಗೋದನ್ನ ತಡೆಯೋರು ಯಾರು,ಜನರ ರಕ್ಷಣೆಯ ಜವಾಬ್ದಾರಿಯನ್ನ ಸರ್ಕಾರ ಮರೆತಿದೆಯಾ, ಸರ್ಕಾರ ಕುಂಭಕರ್ಣ ನಿದ್ದೆ ಮಾಡ್ತಿದೆ ಎಂದು ಕಿಡಿಕಾರಿದರು.
ಕೋಲಾರದಲ್ಲಿ ಆರು ದಲಿತರನ್ನು ಸುಟ್ಟು ಹಾಕಿದ ಪ್ರಕರಣದ ಬಗ್ಗೆ ಮಾತನಾಡಿದ ಅಶೋಕ್, ಖರ್ಗೆಯವರು ಆವತ್ತು ಸದನದಲ್ಲಿ ಕಣ್ಣೀರು ಹಾಕಿದ್ದರು, ಆದರೆ ಈಗ ಈ ಸರ್ಕಾರಕ್ಕೆ ಕಾಳಜಿ, ಜವಾಬ್ದಾರಿ ಇಲ್ಲ ಎಂದು ಗುಡುಗಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪರಮೇಶ್ವರ್, ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಏಳು ಜನರ ವಿಚಾರಣೆ ಮಾಡಲಾಗಿದೆ. ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೀವಿ. ಸರ್ಕಾರ ಗಂಭೀರವಾಗಿ ತನಿಖೆ ನಡೆಸ್ತಿದೆ, ಹಗುರವಾಗಿ ನೋಡ್ತಿಲ್ಲ,ಯಾರ ರಕ್ಷಣೆಯನ್ನು ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಏಳು ಜನರನ್ನ ಮಾತಾಡ್ಸಿ ಕಳ್ಸಿದ್ದೀರಾ, ಬಿರಿಯಾನಿ ತಿನಿಸಿ ಕಳಿಸಿದ್ದೀರಾ ಒದ್ದು ಒಳಗೆ ಹಾಕೋದಲ್ವಾ ಒಬ್ಬರನ್ನೂ ಬಂಧಿಸಿಲ್ಲ. ಸರ್ಕಾರಕ್ಕೆ ನೈತಿಕತೆ ಇಲ್ಲ, ಕರೆದು ಸನ್ಮಾನ ಮಾಡಿದ್ದೀರ, ಇದಕ್ಕಿಂತಲೂ ನಾಚಿಕೆ ಸಂಗತಿ ಏನಿದೆ ಎಂದು ಕಿಡಿಕಾರಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೀವಿ. ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದೀವಿ. ಸೂಮೋಟೋ ಪ್ರಕರಣ ದಾಖಲಾಗಿದೆ. ತನಿಖೆ ನಡೀತಿದೆ. ನಮಗೆ ದೇಶಭಕ್ತಿ ನಿಮಗಿಂತ ನೂರು ಪಾಲು ಜಾಸ್ತಿ ಇದೆ. ಯಾರೇ ಪಾಕಿಸ್ತಾನ ಜಿಂದಾಬಾದ್ ಕೂಗಿದ್ರೆ ಕಠಿಣ ಕ್ರಮ ಖಚಿತ, ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಆಗ ಸದನದಲ್ಲಿ ಗದ್ದಲ, ವಾಕ್ಸಮರ ಜೋರಾಯಿತು ಜತೆಗೆ ಬಿಜೆಪಿ-ಜೆಡಿಎಸ್ ಸದಸ್ಯರು ಧರಣಿ ಕುಳಿತರು. ಧರಣಿ ನಡುವೆಯೇ ಬಜೆಟ್ ಮೇಲೆ ನಡೆದ ಚರ್ಚೆಗೆ ಸಿಎಂ ಉತ್ತರ ನೀಡಲು ಪ್ರಾರಂಭಿಸಿದರು,ಆಗ ಸಿಎಂ ಉತ್ತರ ಖಂಡಿಸಿ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.