ಬೆಂಗಳೂರು:ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಯಾವುದೇ ಕಾಲಾವಕಾಶ ಕೇಳುವುದಿಲ್ಲ,ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅರಮನೆ ಮೈದಾನ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ನಮಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನೆಲ್ಲಾ ತೀರ್ಮಾನ ಮಾಡಬೇಕೋ ಅದನ್ನು ಸರ್ಕಾರ ಮಾಡಲಿದೆ, ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ ಎಂದು ತಿಳಿಸಿದರು.
ಚುನಾವಣಾ ಮೀಸಲಾತಿ ವಿಚಾರದಲ್ಲಿ “ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದ್ದು, ಅದು ತೀರ್ಮಾನ ಮಾಡಲಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ನೀಡುತ್ತೇವೆ. ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ಇದನ್ನು ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ತಿಳಿಸಿದರು.
ನಮ್ಮ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ:
ಈ ಚುನಾವಣೆ ನಿಮ್ಮ ಪಾಲಿಗೆ ಎಷ್ಟು ಸವಾಲಿನದ್ದಾಗಿದೆ ಎಂದು ಕೇಳಿದಾಗ, “ಏನು ಸವಾಲಿದೆ? ಚುನಾವಣೆ ನಡೆಸುವುದು ನನ್ನ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡುವು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ” ಎಂದರು.
ನೇರ ಹಣಾಹಣಿಗೆ ಬಿಜೆಪಿ- ಜೆಡಿಎಸ್ ಒಂದಾಗಬೇಕು:
ಬಿಜೆಪಿ ಹಾಗೂ ಜೆಡಿಎಸ್ ಫ್ರೆಂಡ್ಲಿ ಫೈಟ್ ವಿಚಾರವಾಗಿ ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ಜತೆಯಾಗಿಯಾದರೂ ಚುನಾವಣೆ ಮಾಡಲಿ, ಬೇರೆಯಾಗಿ ಬೇಕಾದರೂ ಮಾಡಲಿ. ಅವರು ಸಂಸತ್ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಮಾಡಿದಂತೆ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯನ್ನು ಮಾಡಿದರೆ ನೇರ ಹಣಾಹಣಿ ಇರುತ್ತದೆ” ಎಂದು ತಿಳಿಸಿದರು.

