ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಗುಡ್ ನ್ಯೂಸ್ ನೀಡಿದ್ದು, ಮೊಬೈಲ್ ಕ್ಯೂಆರ್ (QR) ಆಧಾರಿತ 1, 3 , 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಅನ್ನು ಪರಿಚಯಿಸುತ್ತಿದೆ.ಇದರಿಂದಾಗಿ ಪಾಸ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪಲಿದೆ.
ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಜನವರಿ 15 ರ ಸಂಕ್ರಾಂತಿಯಂದು ಮೊಬೈಲ್ ಕ್ಯೂಆರ್ (QR) ಆಧಾರಿತ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಪರಿಚಯಿಸುತ್ತಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಸ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ QR ಪಾಸ್‌ಗಳ ಪರಿಚಯದೊಂದಿಗೆ, QR ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.
ಮೊಬೈಲ್ QR ಪಾಸ್‌ಗಳ ಪ್ರಮುಖ ವೈಶಿಷ್ಟ್ಯಗಳು:
ಭದ್ರತಾ ಠೇವಣಿ ಅಗತ್ಯವಿಲ್ಲ: ಸ್ಮಾರ್ಟ್ ಕಾರ್ಡ್‌ಳಿಗೆ ಅಗತ್ಯವಿದ್ದ ₹50 ಠೇವಣಿ ಡಿಜಿಟಲ್ QR ಪಾಸ್‌ಗಳಿಗೆ ಇರುವುದಿಲ್ಲ.
ಸರಳ ಖರೀದಿ ವ್ಯವಸ್ಥೆ: ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು.
ಸ್ಪರ್ಶರಹಿತ ಪ್ರವೇಶ ಮತ್ತು ನಿರ್ಗಮನ: ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ದರಗಳ ವಿವರ:
ಸ್ಮಾರ್ಟ್ ಕಾರ್ಡ್ ದರ (₹50 ಠೇವಣಿ ಸೇರಿ)
1 ದಿನದ ಪಾಸ್ ₹300
3 ದಿನಗಳ ಪಾಸ್ ₹600
5 ದಿನಗಳ ಪಾಸ್ ₹900
ಮೊಬೈಲ್ QR ಪಾಸ್ ದರ (ಠೇವಣಿ ಇಲ್ಲ)
1 ದಿನ ಅನಿಯಮಿತ ಪ್ರಯಾಣ ₹250
3 ದಿನಗಳ ಅನಿಯಮಿತ ಪ್ರಯಾಣ ₹550
5 ದಿನಗಳ ಅನಿಯಮಿತ ಪ್ರಯಾಣ ₹850
ಬಿಎಂಆರ್‌ಸಿಎಲ್, ಪ್ರಯಾಣಿಕರ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳನ್ನು ತಪ್ಪಿಸಿ, ಸಮಯವನ್ನು ಉಳಿಸಲು ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಮೊಬೈಲ್ QR-ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತದೆ. ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ನಿಗಮ ಹೇಳಿಕೊಂಡಿದೆ.

