Fri. Mar 6th, 2026

ಸಿಎಂ ಸ್ಥಾನದ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Share this with Friends

ದೆಹಲಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ,ಅಧಿಕಾರ ಹಸ್ತಾಂತರದ ವಿಚಾರ ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ ಇದೇನಿದ್ದರೂ ನಮ್ಮ ನಡುವೆ ಆಂತರಿಕವಾಗಿ ಚರ್ಚಿಸಲ್ಪಡುವ ವಿಷಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು,“ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ”.ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಾಯಿತೇ ಇಲ್ಲವೇ ಎನ್ನುವ ಕುರಿತು ಬಹಿರಂಗವಾಗಿ ಏನೂ ಹೇಳುವುದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.

ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ ಅದಕ್ಕಾಗಿ ಬಂದಿದ್ದೇನೆ ಎಂದ ಡಿಸಿಎಂ, ಈ ಸಭೆಯ ಯೋಜನೆಗಳೇನು ಎಂದು ಕೇಳಿದಾಗ, “ನಮ್ಮ ಪಕ್ಷದ ಯೋಜನೆಗಳನ್ನು ಬಹಿರಂಗಪಡಿಸಲು ಹೇಗೆ ಸಾಧ್ಯ? ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚೆ ಮಾಡಲಾಗುವುದು. ಸಾರ್ವಜನಿಕವಾಗಿ ಅಲ್ಲ. ಏನಾದರೂ ಮಾಹಿತಿ ನೀಡುವುದಿದ್ದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ, ಅವರು ನೀಡುತ್ತಾರೆ” ಎಂದರು.

ಈ ಪ್ರವಾಸದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ, ನೋಡೋಣ” ಎಂದರು.

ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ಮಾಡಬೇಕಾಗಿದ್ದು, ಹೀಗಾಗಿ ಕಾನೂನು ತಜ್ಞರು ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ” ಎಂದು ತಿಳಿಸಿದರು.


Share this with Friends

Related Post