ಬೆಂಗಳೂರು:ಫೆಬ್ರವರಿಯಲ್ಲಿ ಮತ್ತೆ ಮೆಟ್ರೋ ದರ ಏರಿಕೆ ಮಾಡಲು ಬಿ.ಎಂ. ಆರ್.ಸಿ.ಎಲ್ ಮುಂದಾದರೆ, ಬಿಜೆಪಿ ವತಿಯಿಂದ ಪ್ರತಿಯೊಂದು ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ಇಂದು ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಆಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಮೆಟ್ರೋ ಬಳಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿ, ಚೆನ್ನೈ, ಕೊಚ್ಚಿ ಮೆಟ್ರೋಗಳಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಇರುವ ದರವನ್ನು ಬೆಂಗಳೂರಿನ ಮೆಟ್ರೋದೊಂದಿಗೆ ಹೋಲಿಸಿದರೆ ಇಲ್ಲಿ ದರ ದ್ವಿಗುಣವಾಗಿದೆ ಆದರೂ ಮುಂಬರುವ ಫೆಬ್ರುವರಿಯಲ್ಲಿ ಮತ್ತೆ ಬಿ.ಎಂ. ಆರ್.ಸಿ.ಎಲ್ 5% ದರ ಏರಿಕೆಗೆ ಮುಂದಾಗಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಬಿ.ಎಂ. ಆರ್.ಸಿ.ಎಲ್ ಜನರನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿವೆ. ಇದರ ಜೊತೆಗೆ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ಕಳೆದ ನಾಲ್ಕು ವರ್ಷಗಳಿಂದ ತೀವ್ರವಾಗಿ ವಿಳಂಬವಾಗಿದ್ದು, ಇದಕ್ಕೂ ಬಿಎಂಆರ್ಸಿಎಲ್ ಹೊಣೆಗಾರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
“ ಹಿಂದೆ ದರ ನಿಗದಿ ಸಮಿತಿ ತೀರ್ಮಾನಿಸಿದ್ದ ನಿರ್ಧಾರವೇ ತಪ್ಪಾಗಿದೆ ಎಂದು ನಾವು ಸ್ಪಷ್ಟವಾಗಿ ಕಿವಿ ಹಿಂಡುವ ಕೆಲಸ ಮಾಡಿದ್ದೆವು. ಆದರೆ ಬಿ.ಎಂ. ಆರ್.ಸಿ.ಎಲ್ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗಲಾದರೂ ಈ ತಪ್ಪು ನಿರ್ಧಾರವನ್ನು ಸರಿಪಡಿಸಬೇಕು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ – ರಾಜ್ಯ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಪರವಾಗಿ ನಿಲ್ಲಬೇಕು. ಮೆಟ್ರೋ ದರ ನಿಗದಿ ಮಾಡುವ ದರನಿಗದಿ ಸಮಿತಿ ಪುನರ್ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಪತ್ರ ಬರೆಯಬೇಕು. ಈ ವಿಚಾರದಲ್ಲಿ ಬೆಂಗಳೂರಿನ ಎಲ್ಲಾ ಸಂಸದರ ಸಂಪೂರ್ಣ ಸಹಕಾರ ಇರುತ್ತದೆ” ಎಂದು ಸಂಸದ ಸೂರ್ಯ ರವರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ದರ ಏರಿಕೆ ಮಾಡಿ, ಅದರ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರದ ಮೇಲೆ ತಳ್ಳುವ ಕೆಲಸವನ್ನು ಬಿಡಬೇಕು. ಜನ ವಿರೋಧಿ, ಅವೈಜ್ಞಾನಿಕ ಮೆಟ್ರೋ ದರ ಏರಿಕೆಯನ್ನು ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ,ಮೆಟ್ರೋದರ ಹೆಚ್ಚಳ ನಿರ್ಧಾರ ಕೈಬಿಡುವ ಮೂಲಕ ಬೆಂಗಳೂರಿನ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು.ಒಂದು ವೇಳೆ ಫೆಬ್ರವರಿಯಲ್ಲಿ ಮತ್ತೆ ಮೆಟ್ರೋ ದರ ಏರಿಕೆ ಮಾಡಲು ಬಿ.ಎಂ. ಆರ್.ಸಿ.ಎಲ್ ಮುಂದಾದರೆ, ಬಿಜೆಪಿ ವತಿಯಿಂದ ಪ್ರತಿಯೊಂದು ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಎಚ್ಚರಿಕೆ ನೀಡಿದರು.

