Fri. Mar 6th, 2026

ಕಾನೂನಿಗಿಂತ ಯಾರೂ ದೊಡ್ಡವರಲ್ಲ,ರಾಜೀವ್ ಗೌಡ ಬಂಧನ ಖಚಿತ: ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು: ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರು ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ,ಬಳ್ಳಾರಿ ಘಟನೆ ಸಂಬಂಧ ತನಿಖಾ ವರದಿ ಬಂದ ತಕ್ಷಣ ತಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ ಅದೇ ರೀತಿ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡರನ್ನು ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಬಳ್ಳಾರಿ ಸೂಕ್ಷ್ಮ ಪ್ರದೇಶವಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ  ಅಮಾನತು ಮಾಡಲಾಗಿದೆ . ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜೀವ್ ಗೌಡರನ್ನು ಬಂಧಿಸಲಾಗುವುದು:

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು ಅವರು ತಲೆಮರೆಸಿಕೊಂಡಿದ್ದು,  ಅವರನ್ನು ಬಂಧಿಸಲಾಗುವುದು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದರು.

ಐಪಿಎಲ್ ಕುರಿತಂತೆ ಮಾಧ್ಯಮದವರ  ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಡಿ ಮೈಕಲ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಅವರ ಶಿಫಾರಸ್ಸುಗಳನ್ನು ಪಾಲಿಸಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಅವರು ಅಲ್ಪಾವಧಿ ಶಿಫಾರಸ್ಸುಗಳನ್ನು ಕೂಡಲೆ ಜಾರಿಗೆ ತರಬೇಕು ಹಾಗೂ ದೀರ್ಘಾವಧಿಯಲ್ಲಿ ಉಳಿದವನ್ನು ಪಾಲಿಸಬೇಕಿದೆ. ಶಿಫಾರಸುಗಳನ್ನು ಜಾರಿ ಮಾಡಲೇಬೇಕು ಎಂದರು.

ಡ್ರಗ್ಸ್ ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸರ ಮೇಲೆ ಕ್ರಮಕ್ಕೆ ಸೂಚನೆ:

ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್  ಪತ್ತೆಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರು ಏಕೆ ಮಾಡಬಾರದು?  ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು,   ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗುತ್ತದೆ. ಹೊಸ ಕಾನೂನು ಅಥವಾ ತಿದ್ದುಪಡಿಯನ್ನು ಮುಂಬರುವ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದರು.

ಡ್ರಗ್ಸ್ ದಂಧೆ ಮಾಡುವ ವಿದೇಶಿಯರನ್ನು  ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು:

ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡಬೇಕಾದರೆ ಡ್ರಗ್ಸ್ ಮಾರಾಟ ಮಾಡುವವರನ್ನು ವಿಚಾರಣೆ ಮಾಡಿದರೆ ಅಥವಾ ಮಾದಕ ವಸ್ತು ವ್ಯಸನಿಗಳನ್ನು ವಿಚಾರಿಸಿದರೆ ಡ್ರಗ್ಸ್  ಜಾಲವನ್ನು ಪತ್ತೆ ಹಚ್ಚಬಹುದು. ಸರಬರಾಜು ಮಾಡುವವರನ್ನು ವಿಚಾರಣೆಗೆ ಗುರಿ ಪಡಿಸಿದರೆ  ಉತ್ಪಾದಕರು ಹಾಗೂ ಸರಬರಾಜುದಾರರು ಯಾರು ಎಂದು ತಿಳಿಯುತ್ತದೆ. ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಕೆಲಸವನ್ನು ತಕ್ಷಣದಿಂದಲೇ ಮಾಡಬೇಕೆಂದು ಸೂಚಿಸಲಾಗಿದೆ.  ವಿದೇಶಿಯರು ಜಾಮೀನಿನ ಮೇಲೆ ಬಿಡುಗಡೆಯಾಗಿ ಇಲ್ಲೇ ಉಳಿದರೆ ಪುನಃ ಅದೇ ಅಪರಾಧದಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ವಿದೇಶಿಯರನ್ನು ಯಾವುದೇ ಮುಲಾಜಿಲ್ಲದೆ ಅವರ ದೇಶಕ್ಕೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ ಎಂದರು.


Share this with Friends

Related Post