ಬೆಂಗಳೂರು: ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾರ್ಪಾಡು ವಿರೋಧಿಸಿ ಹೋರಾಟ ಆರಂಭಿಸಿರುವ ಕಾಂಗ್ರೆಸ್ ಇದೀಗ ಸದನದಲ್ಲಿ ಈ ಕುರಿತು ಚರ್ಚೆಗೆ ಮುಂದಾಗಿದ್ದು ಇದಕ್ಕಾಗಿ ವಿಶೇಷ ಅಧಿವೇಶನವನ್ನು ಕರೆದಿದೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ, ರಾಜ್ಯಪಾಲರ ಭಾಷಣ ಮತ್ತು ನರೇಗಾ(MGNREGA) ಯೋಜನೆ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದರು.
ವಿಶೇಷ ಅಧಿವೇಶನದ ನಂತರ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಆಯವ್ಯಯದ ಸಿದ್ಧತೆ ಪ್ರಾರಂಭಿಸಲಾಗುವುದು,ಬಜೆಟ್ ಅಧಿವೇಶನಕ್ಕೂ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ನವದೆಹಲಿಗೆ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ವರಿಷ್ಠರು ಕರೆ ನೀಡಿದರೆ ನವದೆಹಲಿಗೆ ತೆರಳುತ್ತೇನೆ, ಆಹ್ವಾನವಿಲ್ಲದೆ ಅಲ್ಲಿಗೆ ತೆರಳುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ವೀಡಿಯೋ ವೈರಲ್ ಪ್ರಕರಣ ಸಂಬಂಧ ಡಿಜಿಪಿ ರಾಮಚಂದ್ರರಾವ್ ಅವರ ಅನುಚಿತ ವರ್ತನೆ ವಿರುದ್ಧ ಈಗಾಗಲೇ ಶಿಸ್ತಿನ ಕ್ರಮ ಜರುಗಿಸಿ,ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಈ ಸಂಬಂಧ ಅಗತ್ಯ ತನಿಖೆ ನಡೆಸಲಾಗುತ್ತದೆ ಎಂದರು

