Sat. Mar 7th, 2026

ಡಿಸಿ ಕೇಸರಿ ಧ್ಚಜ ಹಾರಿಸಿದ ವಿಚಾರ ಇಲ್ಲಿಗೆ ಬಿಟ್ಟು ಬಿಡಿ:ಲಕ್ಷ್ಮೀ ಹೆಬ್ಬಾಳ್ಕರ್

Share this with Friends

ಉಡುಪಿ: ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿದ ವಿಚಾರವನ್ನು ಬೆಳೆಸುವ ಅಗತ್ಯವಿಲ್ಲ, ಅದನ್ನು ಇಲ್ಲಿಗೆ ಬಿಟ್ಟುಬಿಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಪರ್ಯಾಯ ವೇಳೆ ಜಿಲ್ಲಾಧಿಕಾರಿ ಭಗವದ್ವಜ ಹಾರಿಸಿದ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ ಆದರೆ ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ.ನಮ್ಮ ಸಂಸ್ಕೃತಿ ಧಾರ್ಮಿಕತೆಗೆ ಉಡುಪಿ ಹೆಸರುವಾಸಿಯಾಗಿದೆ ಹಾಗಾಗಿ ಈ ವಿಚಾರ ನನಗೆ ಗೊತ್ತಿದೆ. ದ್ವಜ ಹಾರಿಸಿದ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡಿ ಎಂದು ತಿಳಿಸಿದರು.

ಐಕ್ಯತೆಯ ದೃಷ್ಟಿಯಿಂದ ದ್ವೇಷ ಭಾಷಣ ಕಾನೂನು:

ದ್ವೇಷ ಭಾಷಣ ಕಾನೂನು ಜಾರಿಗೂ ಮುನ್ನ ನೋಟಿಸ್ ನೀಡಿರುವುದರ ಬಗ್ಗೆ ಮಾತನಾಡಿದ ಸಚಿವರು, ಈಗ ಕಾಂಗ್ರೆಸ್ ಸರ್ಕಾರ ಇದೆ. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತಂದಿದ್ದೇವೆ. ಭವಿಷ್ಯದಲ್ಲಿ ಯಾವತ್ತಾದರೂ ಬಿಜೆಪಿ ಸರ್ಕಾರ ಬರಬಹುದು. ಅವರು ನಮ್ಮ ವಿರುದ್ಧವೂ ಇದನ್ನು ಬಳಕೆ ಮಾಡಬಹುದು. ದೇಶದ ಐಕ್ಯತೆ ಸಮಗ್ರತೆ ಒಂದೇ ದ್ವೇಷ ಭಾಷಣ ಮಸೂದೆಯ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ಈ ಕಾರಣಕ್ಕೆ ಸಂವಿಧಾನದ ಆಶಯದಂತೆ ಮಸೂದೆ ತಂದಿದ್ದೇವೆ. ಬಿಜೆಪಿಯವರು ಏನಾದರೂ ಹೇಳಲಿ, ದೇಶದ ಸಂವಿಧಾನಕ್ಕೆ ಧಕ್ಕೆ ಬರಬಾರದು ಎಂಬುದು ಮಾತ್ರ ನಮ್ಮ ಉದ್ದೇಶ, ಕಾಂಗ್ರೆಸಿನವರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಕಾಂಗ್ರೆಸ್ ನವರ ಮೇಲೂ ಕಾನೂನು ಜಾರಿಯಾಗುತ್ತದೆ ಎಂದರು.

ಪರಶುರಾಮ ಕರಾವಳಿಗರ ಆರಾಧ್ಯದೈವ:

ಪರಶುರಾಮ ಥೀಂ ಪಾರ್ಕ್ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರಶುರಾಮನನ್ನು ಕರಾವಳಿಯಲ್ಲಿ ಆರಾಧಿಸಲಾಗುತ್ತದೆ. ನಮಗೂ ಕೂಡ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಇಷ್ಟ ಇಲ್ಲ. ಸುನೀಲ್ ಕುಮಾರ್ ಪರಶುರಾಮನ ಮೂರ್ತಿಯನ್ನು ಫೈಬರ್ ನಲ್ಲಿ ಮಾಡಿಸಿದ್ದರು. ಫೈಬರ್ ನಲ್ಲಿ ಮಾಡಿಸಿ ಕಂಚಿನ ಮೂರ್ತಿ ಎಂದು ನಂಬಿಸಿದ್ದರು. ಜನರ ದಿಕ್ಕು ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಜನರನ್ನು ನಂಬಿಸಿ ಮೋಸ ಮಾಡಿದ್ದು, ರಾಜಕೀಯ ಮಾಡಿದ್ದು ಸುನೀಲ್ ಕುಮಾರ್, ಕಾಂಗ್ರೆಸ್ ನವರಿಗೆ ದೇವರ ವಿಚಾರದಲ್ಲಿ ರಾಜಕೀಯ ಮಾಡುವ ದರ್ದು ಇಲ್ಲ. ಆದಷ್ಟು ಬೇಗ ಪರಶುರಾಮ ಮೂರ್ತಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡ್ತೇವೆ ಎಂದರು.

ವಾರಾಹಿ ಯೋಜನೆ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದು, ಯೋಜನೆಯ ಬಗ್ಗೆ   ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮಾಹಿತಿ ಇದೆ‌, ಇದು ರೈತರ ಅನುಕೂಲಕ್ಕಾಗಿ ಮಾಡಿದ ಯೋಜನೆ, ತಾಂತ್ರಿಕ ತಂಡ ಬಂದು ಹೋಗಿದೆ. ಯೋಜನೆಯ ಬಗ್ಗೆ ತಾಂತ್ರಿಕ ತಂಡದ ಜೊತೆ ಸಭೆ ಮಾಡುತ್ತೇವೆ. ಆದಷ್ಟು ಬೇಗ ಪರಿಹಾರ ಕಲ್ಪಿಸುತ್ತೇವೆ. ತಾಂತ್ರಿಕ ತಂಡ ಪರಿಶೀಲನೆ ನಡೆಸಿದ ಬಗ್ಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿ ಇದ್ದು, ಆದಷ್ಟು ಬೇಗಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.‌ ಈ ಯೋಜನೆ ನೆನೆಗುದಿಗೆ ಬಿದ್ದಿರುವುದು ದುರ್ದೈವ ಎಂದು ಹೇಳಿದರು.

ಸ್ಟೇಂಟ್ ಮೇರಿಸ್ ದ್ವೀಪದಲ್ಲಿ ಬಾವುಟ ಹಾರಿಸಿದ್ದು ಹೊಸ ಅನುಭವ:

ಇಂದು ಸೇಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ್ದು ಖುಷಿ ನೀಡಿತು. ‌ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ದ್ವೀಪದಲ್ಲಿ ಧ್ವಜಾರೋಹಣ ಮಾಡಿದೆ. ಇದು ರೋಮಾಂಚಕ ಅನುಭವ, ಇದ ನನ್ನ ಭಾಗ್ಯ‌ ಕೂಡ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.


Share this with Friends

Related Post