ಬೆಂಗಳೂರು:ವಿಧಾನಸಭೆ ಕಲಾಪದ ಅಜೆಂಡಾದಂತೆ ಕಾರ್ಯಕಲಾಪ ನಿಗದಿಯಾಗಿದ್ದರೂ ಕೂಡ ಅದೇ ಸಮಯದಲ್ಲಿ ತನ್ನೆಲ್ಲಾ ಶಾಸಕರೊಂದಿಗೆ ರಾಜಭವನ ಚಲೋ ಹಮ್ಮಿಕೊಂಡಿರುವ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅಲ್ಲದೆ ಆಡಳಿತ ಪಕ್ಷವೇ ರಾಜಭವನ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವೇ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ನಾಳೆ ಮಂಗಳವಾರ ಕರ್ನಾಟಕ ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದ್ದು, ಮೊದಲು ಪ್ರಶ್ನೋತ್ತರ ಕಲಾಪ ನಂತರ ರಾಜ್ಯಪಾಲರ ಭಾಷಣದ ಮೇಲೆ ಗೊಂದಲ ನಿರ್ಣಯದ ಕುರಿತು ಚರ್ಚೆ……..ಎಂಬುದು ನಾಳಿನ ಕಲಾಪದ ಅಜೆಂಡಾದಲ್ಲಿದೆ. ಆದರೆ ನಾಳೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ ನಿಂದ ಕಾಂಗ್ರೆಸ್ ಪಕ್ಷದ ಲೋಕಭವನದ ಮುತ್ತಿಗೆ ( ರಾಜಭವನ್ ಚಲೋ ) ಕಾರ್ಯಕ್ರಮ ನಡೆಯುತ್ತದೆ ಎಂಬ ಪ್ರಕಟಣೆ ಕಾಂಗ್ರೆಸ್ ಪಕ್ಷದಿಂದ ಹೊರ ಬಿದ್ದಿದೆ. ಈಗ ಎರಡು ಪ್ರಶ್ನೆಗಳು ಉದ್ಭವವಾಗುತ್ತದೆ ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಪ್ರಶ್ನೆ:
1) ಅಧಿವೇಶನ ನಡೆಯುತ್ತಿರುವಾಗ ಅಧಿವೇಶನ ದ ಸಮಯದಲ್ಲಿಯೇ ಆಳುವ ಪಕ್ಷ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡು ತನ್ನ ಶಾಸಕರುಗಳೆಲ್ಲಾ ಭಾಗವಹಿಸುತ್ತಾರೆ ಎಂದು ಹೇಳಿರುವುದು ಎಷ್ಟು ಸಮಂಜಸ?
2) ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವಂತಹ ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿರ್ದೇಶನಂತೆ ನಿಷೇಧಿಸಲಾಗಿದೆ.
ಒಂದೊಮ್ಮೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ ಬೇರೆ ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆಯೇ? ರಾಜ್ಯದಲ್ಲಿ ಆಡಳಿತ ನಡೆಸುವ ನಡೆಸುತ್ತಿರುವ ಪಕ್ಷವೇ ಕಾನೂನನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ? ಆಡಳಿತ ನಡೆಸಬೇಕಾದ ಪಕ್ಷವೇ ಈ ರೀತಿ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವೇ? ಎಂದು ಪ್ರಶ್ನಿಸಿದ್ದಾರೆ.

