Fri. Mar 6th, 2026

ಸುಸ್ಥಿರ, ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಭಾರತದ ಆಟೋಮೋಟಿವ್ ವಲಯ ಸಜ್ಜು:ಕುಮಾರಸ್ವಾಮಿ

Share this with Friends

ಪುಣೆ:ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಭಾರತದ ಆಟೋಮೋಟಿವ್ ವಲಯ ಸಜ್ಜಾಗಿದ್ದು,ದೇಶಿಯ ಆಟೋಮೊಬೈಲ್‌ ಕ್ಷೇತ್ರ ನಾಗಾಲೋಟದಲ್ಲಿ ಬೆಳವಣಿಗೆ ಆಗುತ್ತಿದೆ.ಉತ್ಪಾದನೆ, ರಫ್ತಿನಲ್ಲಿಯೂ ಗಣನೀಯ ಪ್ರಗತಿ ಕಂಡುಬಂದಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಪುಣೆಯಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ (SIAT) 2026ರ ಮೂರು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು; ಭಾರತೀಯ ಆಟೋಮೊಬೈಲ್‌ ಕ್ಷೇತ್ರವು ಭಾರೀ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ; 2023-24ನೇ ಹಣಕಾಸು ವರ್ಷದಲ್ಲಿ 28.4 ಮಿಲಿಯನ್ ಯೂನಿಟ್‌ಗಳಿಂದ 2024-25ನೇ ಹಣಕಾಸು ವರ್ಷದಲ್ಲಿ 31 ಮಿಲಿಯನ್ ಯೂನಿಟ್‌ಗಳಿಗೆ ವಾಹನ ಉತ್ಪಾದನೆ ಹೆಚ್ಚಾಗಿದೆ, ಆದರೆ, ಅದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯೂನಿಟ್‌ಗಳಿಂದ 5.36 ಮಿಲಿಯನ್ ಯೂನಿಟ್‌ಗಳಿಗೆ ಏರಿದೆ. ಈ ಅಂಕಿ-ಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ವಲಯವನ್ನು ಉತ್ತೇಜಿಸುವಲ್ಲಿ ಸರಕಾರದ ಪ್ರಯತ್ನಗಳ ಯಶಸ್ಸನ್ನು ಪ್ರತಿಬಿಂಬಿಸುತ್ತವೆ ಎಂದರು.

ಭಾರತದ ತ್ವರಿತ ಆರ್ಥಿಕ ಪ್ರಗತಿಯ ಬಗ್ಗೆ ಒತ್ತಿ ಹೇಳಿದ ಕೇಂದ್ರ ಸಚಿವರುʼ “ಭಾರತವು USD $4.18 ಟ್ರಿಲಿಯನ್ ಜಿಡಿಪಿಯೊಂದಿಗೆ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಮುಂಬರುವ ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. 2030ರ ವೇಳೆಗೆ ಭಾರತದ ಯೋಜಿತ GDP $7.3 ಟ್ರಿಲಿಯನ್ ಮೈಲುಗಲ್ಲು ದಾಟುವ ವಿಶ್ವಾಸ, ಸಾಮರ್ಥ್ಯ ಹೊಂದಿದೆ. ಈ ದಿಕ್ಕಿನಲ್ಲಿ ಉತ್ಪಾದನೆ ಮತ್ತು ಬೆಳವಣಿಗೆ ಸಮತೋಲಿತವಾಗಿ ಸಾಗುತ್ತಿದೆ” ಎಂದರು.

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಕೇಂದ್ರಿಕೃತ ದೃಷ್ಟಿಕೋನವು ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನವನ್ನು ವ್ಯಾಖ್ಯಾನಿಸುವ ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸುತ್ತಿದೆ.ಈ ಪರಿವರ್ತನೆಯ ಭಾಗವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಆಮದು ಅವಲಂಬನೆ ಕಡಿಮೆ ಮಾಡುತ್ತಿದೆ. ಇಂಗಾಲ ಹೊರಸೂಸುವಿಕೆಯನ್ನೂ ತಗ್ಗಿಸುತ್ತದೆ ಹಾಗೂ ಭಾರತೀಯ ಉದ್ಯಮ, ನಾವೀನ್ಯಕಾರರು ಮತ್ತು ನಮ್ಮ ಯುವ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ಈ ಸಾಧನೆಯ ಭಾಗವಾಗಿ ಕೇಂದ್ರ ಸರಕಾರದ ನೀತಿಗಳು, ಉಪಕ್ರಮಗಳ ಬಗ್ಗೆ ವಿವರಿಸಿದ ಸಚಿವರುʼ ಬೃಹತ್ ಕೈಗಾರಿಕಾ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ₹11,500 ಕೋಟಿ ವೆಚ್ಚದ FAME-II ಯೋಜನೆಯು 16.71 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳ ಅಳವಡಿಕೆಯನ್ನು ಬೆಂಬಲಿಸಿದೆ ಮತ್ತು ದೇಶಾದ್ಯಂತ 9,000ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಮಂಜೂರಾತಿಗೆ ಅನುವು ಮಾಡಿಕೊಟ್ಟಿದೆ. ಹಾಗೆಯೇ, ₹10,900 ಕೋಟಿ ವೆಚ್ಚದ PM E-DRIVE ಯೋಜನೆಯು ಬೇಡಿಕೆ ಆಧರಿತ ಪ್ರೋತ್ಸಾಹ ಮತ್ತು ವಿಸ್ತರಿಸಿದ ಚಾರ್ಜಿಂಗ್ ಮೂಲಸೌಕರ್ಯದ ಮೂಲಕ ಇವಿ ಕ್ಷೇತ್ರಕ್ಕೆ ಶಕ್ತಿ ನೀಡಿದೆ. ಈ ಯೋಜನೆ ಅಡಿಯಲ್ಲಿ 20 ಲಕ್ಷಕ್ಕೂ ಅಧಿಕ ಇವಿ ವಾಹನಗಳು ಮಾರಾಟವಾಗಿವೆ. ₹25,938 ಕೋಟಿ ವೆಚ್ಚದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ (PLI) ಆಟೋ ಯೋಜನೆಯು ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತಿದೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

PLI-ACC ಯೋಜನೆ ಬಗ್ಗೆಯೂ ಒತ್ತಿ ಹೇಳಿದ ಸಚಿವರು, ಭಾರತದಲ್ಲಿ 50 GWh ಅಡ್ವಾನ್ಸ್‌ಡ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದು ದೀರ್ಘಕಾಲೀನ ಇಂಧನ ಸುರಕ್ಷತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ ಎಂದರು.

ವಾಣಿಜ್ಯ ವಾಹನ ವಿಭಾಗದ ವಿದ್ಯುದೀಕರಣವು ಮಹತ್ವದ್ದಾಗಿದೆ, ಈ ವಾಹನಗಳು ಸಾರಿಗೆ ಸಂಬಂಧಿತ ಮಾಲಿನ್ಯಕ್ಕೆ ಶೇ.40ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ. ಈ ವಿಭಾಗದಲ್ಲಿ ಇವಿ ವಾಹನಗಳ ಅಳವಡಿಕೆ ಬಲಪಡಿಸಲು ದೇಶಾದ್ಯಂತ 70,000ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು PM E-DRIVE ಯೋಜನೆಯಡಿಯಲ್ಲಿ ₹2,000 ಕೋಟಿ ಮೀಸಲಿಡಲಾಗಿದೆ ಎಂದರು.

 


Share this with Friends

Related Post