Fri. Mar 6th, 2026

ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು: ಸರ್ಕಾರಿ ನೌಕರರಿಗೆ ಸೂಚನೆ

Share this with Friends

ಬೆಂಗಳೂರು:ಪ್ರತಿ ತಿಂಗಳ ಮೊದಲ ಶನಿವಾರದಂದು ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ-ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಅಧಿಕಾರಿ-ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು. ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವುದು. ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ-ನೌಕರರಿಗೆ ಶೇ. 5% ಹೆಚ್ಚುವರಿ ರಿಯಾಯಿತಿ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್-ಪ್ಯಾಂಟ್ / ಒವರ್ ಕೋಟ್ ಹಾಗೂ ಇತರೆ ಶಿಸ್ತಿನ ಉಡುಗೆಗಳು.ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ/ ಚೂಡಿದಾರ್ ಇತರೆ ಶಿಸ್ತಿನ ಉಡುಗೆಗಳು ತೊಡಬೇಕು. ಉದ್ದೇಶಿತ ಈ ಯೋಜನೆಯನ್ನು ಸರ್ಕಾರಿ ನೌಕರರ ದಿನಾಚರಣೆ 21-04-2026 ರಂದು ಚಾಲನೆ ನೀಡಲಿದ್ದು,ಈ ಸಂಬಂಧ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಲಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.

ಇದೇ ಸಭೆಯಲ್ಲಿಯೇ  ಎಂ.ಎಸ್.ಐ.ಎಲ್. ಸಂಸ್ಥೆಯ ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು “ಸರ್ಕಾರಿ ನೌಕರರ ಕ್ಯಾಂಟೀನ್” ಪ್ರಾರಂಭಿಸಲು 2026-27ನೇ ಸಾಲಿನ ಆಯ-ವ್ಯಯದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿತು.

ಕೆ.ಎಸ್.ಐ.ಸಿ. ಸಂಸ್ಥೆಯು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ.5% ವಿಶೇಷ ರಿಯಾಯಿತಿ ನೀಡುತ್ತಿರುವ ಮಾದರಿಯಲ್ಲೇ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ-ನೌಕರರಿಗೂ ಹೆಚ್ಚುವರಿ ಶೇ. 5% ವಿಶೇಷ ರಿಯಾಯಿತಿ ನೀಡುವಂತೆ ಮನವಿ ಮಾಡಿತು.


Share this with Friends

Related Post