Fri. Mar 6th, 2026

ಸೆಂಟ್ರಲ್ ಕಮಾಂಡ್ ಸೆಂಟರ್ ಗೆ ಪ್ರಮುಖ ಕಾರಾಗೃಹಗಳ ಸಿಸಿಟಿವಿಗಳು ಕನೆಕ್ಟ್…,!

Share this with Friends

ಬೆಂಗಳೂರು:ಕಾರಾಗೃಹಗಳಿಗೆ ನಿಷೇಧಿತ ವಸ್ತುಗಳ ಸರಬರಾಜು, ಕಾನೂನು ಬಾಹಿರ ಚಟುವಟಿಕೆ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲನೆಗೆ ರಾಜ್ಯದ ಎಲ್ಲ ಪ್ರಮುಖ ಕಾರಾಗೃಹಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಸೆಂಟ್ರಲ್ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ಕಾರಾಗೃಹಗಳ ಸಿಸಿಟಿವಿಗಳನ್ನೂ ಕಮಾಂಡ್ ಸೆಂಟರ್ ಗೆ ಕನೆಕ್ಟ್ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದ ಸಂದರ್ಭದಲ್ಲಿ ತುರ್ತಾಗಿ ಕಾರ್ಯಾಚರಣೆ ಹಾಗೂ ಪರಿಶೀಲನೆ ನಡೆಸಲು ಅನುಕೂಲವಾಗುವಂತೆ ಮತ್ತು ಘಟನೆ ಕುರಿತು ಸಾಕ್ಷ್ಯ ಸಂರಕ್ಷಿಸಲು. ನೈಜ ಮೇಲ್ವಿಚಾರಣೆ ನಡೆಸಲು ಮತ್ತು ಕಾರಾಗೃಹಗಳೊಂದಿಗೆ ಸಮನ್ವಯ ಸಾಧಿಸಲು ನೂತನವಾಗಿ ಪ್ರಾರಂಭಿಸಲಾಗಿರುವ ಸೆಂಟ್ರಲ್ ಕಮಾಂಡ್ ಸೆಂಟರ್ ಇಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಗೃಹ ಸಚಿವರು ನವ ಸಂಕಲ್ಪ ಮಾಸಿಕ ಪತ್ರಿಕೆ ಹಾಗೂ ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಬಂದಿಗಳಿಗೆ ಕಾರಾಗೃಹಗಳ ನಿಯಮಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಮತ್ತು ಜಾಗೃತಿ ಸಂಬಂಧಿಸಿದ ಮಾಹಿತಿಗಳನ್ನು ಹಾಗೂ Do’s and don’ts ಮಾಹಿತಿಯನ್ನೊಳಗೊಂಡ ಕಾರಾಗೃಹ ನಿಯಮಗಳ ಪಕ್ಷಿನೋಟ ವಿಡಿಯೋ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಗೃಹ ಸಚಿವರು, ಸೆಂಟ್ರಲ್ ಕಮಾಂಡ್ ಸೆಂಟರ್‌ನಲ್ಲಿ ಪ್ರಸ್ತುತ ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಧಾರವಾಡ, ಬೆಳಗಾವಿ, ಕಲಬುರ್ಗಿ ಹಾಗೂ ವಿಜಯಪುರ 08 ಕೇಂದ್ರ ಕಾರಾಗೃಹಗಳು ಮತ್ತು ಮಂಗಳೂರು, ತುಮಕೂರು, ಬೆಂಗಳೂರು ದಕ್ಷಿಣ ಮತ್ತು ಚಾಮರಾಜನಗರ 04 ಜಿಲ್ಲಾ ಕಾರಾಗೃಹಗಳ ಒಟ್ಟು 1076 ಸಿ.ಸಿ.ಟಿ.ವಿ.ಯನ್ನು ವೀಕ್ಷಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಾರಾಗೃಹಗಳ ಸಿಸಿಟಿವಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 332 ಸಿಸಿಟಿವಿ ಕ್ಯಾಮರಾಗಳಿಗೆ Artificial Intrusion Detection system , Crowd Analysis. Prisoners and Staff Movements ಮಾಡಲಾಗುತ್ತದೆ‌. ಕಮಾಂಡ್ ಸೆಂಟರ್‌ಗೆ 20 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ದಿನದ 24/7 ಸಮಯ ವೀಕ್ಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಿ.ಸಿ.ಟಿ.ವಿ. ಪರಿಶೀಲನೆ ಸಮಯದಲ್ಲಿ ಮಹದೇವ, ಆರ್. ವಾರ್ಡರ್ ಸಿಬ್ಬಂದಿಯು ಸಂದರ್ಶಕರ ಕೊಠಡಿಯಲ್ಲಿ ಸರಿಯಾಗಿ ತಪಾಸಣೆ ಮಾಡದೆ ಇರುವುದು ಕಂಡುಬಂದಿದ್ದು, ಸದರಿ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಒಬ್ಬ ಪೊಲೀಸ್ ಸಿಬ್ಬಂದಿಯು ಕಾರಾಗೃಹದ ಒಳಭಾಗಕ್ಕೆ ಹೋಗಿ ಆರೋಪಿ ದರ್ಶನ್ ಭೇಟಿಯಾಗಲು ಪ್ರಯತ್ನಿಸಿದ್ದು, ಸಿಸಿಟಿವಿ ಪರಿಶೀಲನೆಯಲ್ಲಿ ಕಂಡುಬಂದಿದ್ದು, ಅವಕಾಶ ಕಲ್ಪಿಸಿದ ಪ್ರಭು ಚೌವ್ಹಾನ್, ವಾರ್ಡರ್ ರವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ವರ್ಗಾವಣೆ ಮಾಡಲಾಗಿರುತ್ತದೆ. ಮತ್ತು ಸರಕ್ಕನವರ್ ಹೆಡ್ ವಾರ್ಡರ್ ರವರಿಗೆ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಪ್ರಧಾನ ಕಛೇರಿ ಸೆಂಟ್ರಲ್ ಕಮಾಂಡ್ ಸೆಂಟರ್‌ನಲ್ಲಿ ಸಿಸಿಟಿವಿ ಮೇಲ್ವಿಚಾರಣೆಯಲ್ಲಿ ಕಂಡು ಬಂದ ಅಹಿತಕರ ಘಟನೆಗಳನ್ನು  ಘಟನೆಗಳನ್ನು ರಿಜಿಸ್ಟರ್‌ನಲ್ಲಿ ದಾಖಲು ಮಾಡಲಾಗುತ್ತಿದ್ದು, ಪ್ರಧಾನ ಕಛೇರಿಯ ಕಾರಾಗೃಹ ಅಧೀಕ್ಷಕರನ್ನು ನೊಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಆಹಿತಕರ ಘಟನೆಗಳು ಕಂಡುಬಂದಲ್ಲಿ ಸಂಬಂಧಪಟ್ಟ ಕಾರಾಗೃಹಗಳ ಅಧೀಕ್ಷಕರಿಗೆ ತಕ್ಷಣವೇ ಆಗತ್ಯ ಕ್ರಮವಹಿಸುವಂತೆ ತಿಳಿಸಿ ಪ್ರಧಾನ ಕಛೇರಿಗೆ ವರದಿಸಲ್ಲಿಸುವಂತೆ ಸೂಚಿಸಲಾಗುತ್ತಿದೆ ಎಂದರು.

ಪ್ರತಿನಿತ್ಯ ಕಾರಾಗೃಹಗಳ ಬೀಗಮುದ್ರೆಯ (Lockup) ಮತ್ತು ಬೀಗಮುದ್ರೆ ತೆರೆಯುವ (Un Lock) ಸಮಯದಲ್ಲಿ ಅಹಿತಕರ ಘಟನೆಗಳ ಸಾರಾಂಶವನ್ನು ಪಡೆಯಲಾಗುತ್ತಿದೆ.ಕಾರಾಗೃಹ ಸುಧಾರಣಾ ಸಂಕ ಅಭಿಯಾನದಡಿಯಲ್ಲಿ ಇಲ್ಲಿಯವರೆಗೆ 200 ಕ್ಕೂ ಹೆಚ್ಚು ಮೊಬೈಲ್ ಮತ್ತು ಇತರೆ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಘಟನೆಗಳ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ FIR ದಾಖಲಿಸಲಾಗಿರುತ್ತದೆ ಎಂದು ತಿಳಿಸಿದರು.

2025 ನೇ ನವೆಂಬರ್  10 ರಂದು ನಡೆದ ಕಾರಾಗೃಹಗಳ ಭದ್ರತೆ ಮತ್ತು ಪರಿಶೀಲನಾ ಸಭೆಯಲ್ಲಿ  ಖುದ್ದು ಆಸಕ್ತಿ ವಹಿಸಿ ಆದೇಶಿಸಿರುವಂತೆ ಕಾರಾಗೃಹಗಳ ಪ್ರಧಾನ ಕಛೇರಿಯಲ್ಲಿ ಸೆಂಟ್ರಲ್ ಕಮಾಂಡ್ ಸೆಂಟರ್‌ಅನ್ನು ನಿರ್ಮಿಸಲಾಗಿದ್ದು, ಕಾರಾಗೃಹಗಳಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಗಟ್ಟಲು ಹಾಗೂ ಸೂಕ್ತ ಮೇಲ್ವಿಚಾರಣೆ ನಡೆಸಲು ಕ್ರಮವಹಿಸಲಾಗಿದೆ ಎಂದು‌ ತಿಳಿಸಿದರು.

ಕಾರ್ಯಕ್ರಮದಲ್ಲಿ  ಒಳಾಡಳಿತ ಇಲಾಖೆಯ  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯದ ಮಹಾ ನಿರ್ದೇಶಕರು ಮತ್ತು ಆರಕ್ಷಕ ನಿರೀಕ್ಷಕರಾದ ಎಂ .ಎ. ಸಲೀಂ, ಪ್ರಧಾನ ಕಾರ್ಯದರ್ಶಿಗಳು (ಪಿ.ಸಿ.ಎ.ಎಸ್) ಕೆ.ವಿ. ಶರತ್ ಚಂದ್ರ,   ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ,  ಅಲೋಕ್ ಕುಮಾರ್ ಸೇರಿದಂತೆ ಪೊಲೀಸ್ ಕಾರಾಗೃಹದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು


Share this with Friends

Related Post