Fri. Mar 6th, 2026

ಬೆಳಗಾವಿಯಿಂದ ಮುಂಬೈ,ಚೆನ್ನೈಗೆ ಏರ್ ಇಂಡಿಯಾ,ಇಂಡಿಗೋ ಸೇವೆ ಕಲ್ಪಿಸಿ: ಜಗದೀಶ್ ಶೆಟ್ಟರ್ ಮನವಿ

Share this with Friends

ನವದೆಹಲಿ: ಕುಂದಾನಗರಿ ಬೆಳಗಾವಿಯಿಂದ ಪ್ರಮುಖ ನಗರಗಳಾದ ಮುಂಬೈ, ಚನೈ, ಸುರತ್, ಪುಣೆ ಹೀಗೆ ಹಲವು ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಯಿಂದ ವಿಮಾನ ಸೇವೆ ಕಲ್ಪಿಸುವಂತೆ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರಿಗೆ ಮಾಜಿ ಸಿಎಂ ಹಾಗು ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರವಿಮಾನಯಾನ ಸಚಿವರ ಭೇಟಿಯಾದ ಶೆಟ್ಟರ್, ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಹಾಗೂ ಪ್ರಮುಖ ನಗರಗಳಿಗೆ ಇಂಡಿಗೋ ಮತ್ತು ಏ‌ರ್ ಇಂಡಿಯಾ ಎಕ್ಸಪ್ರೆಸ್ ಸಂಸ್ಥೆಯ ವತಿಯಿಂದ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಚರ್ಚಿಸಿದರು.

ಬೆಳಗಾವಿ ನಗರವು ಎಲ್ಲ ರಂಗದಲ್ಲಿ, ವಿಶೇಷವಾಗಿ ಉದ್ಯಮಿಕರಣ ಕ್ಷೇತ್ರದಲ್ಲಿ ಬಹುವೇಗವಾಗಿ ಬೆಳೆಯುತ್ತಿರುವ ನಗರ. ಬೆಳಗಾವಿ ವಿಮಾನ ನಿಲ್ದಾಣವು ಕೇಂದ್ರ ಸರಕಾರದ ಉಡಾನ ಯೋಜನೆಯಲ್ಲಿ ಆಯ್ಕೆಯಾಗಿ, ತದನಂತರ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಅನೇಕ ನಗರಗಳಿಗೆ ಈ ಮೊದಲು ಒದಗಿಸಲಾಗುತ್ತಿದ್ದ ವಿಮಾನಯಾನ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ರದ್ದು ಪಡಿಸಿದ್ದು, ಇದರಿಂದಾಗಿ ಉದ್ಯಮದಾರರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಎನ್ನುವುದನ್ನು ವಿಮಾನಯಾನ ಸಚಿವರ ಗಮನಕ್ಕೆ ತಂದರು.

ದೇಶದ ಪ್ರಮುಖ ನಗರಗಳಾದ ಮುಂಬೈ, ಚನೈ, ಸುರತ್, ಪುಣೆ ಹೀಗೆ ಹಲವು ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಯಿಂದ ಈ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಆಯಾ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿ ಮನವಿ ಸಲ್ಲಿಸಿದರು.

ವಿಮಾನ ನಿಲ್ದಾಣಗಳಿಗೆ ನಾಮಕರಣ:

ಬೆಳಗಾವಿ,ಹುಬ್ಬಳ್ಳಿ,ಶಿವಮೊಗ್ಗ ಹಾಗೂ ವಿಜಯಪುರ, ವಿಮಾನ ನಿಲ್ದಾಣಗಳನ್ನು ಅನುಕ್ರಮವಾಗಿ ಕಿತ್ತೂರ ರಾಣಿ ಚನ್ನಮ್ಮ ಏರಪೋರ್ಟ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಏರಪೋರ್ಟ, ರಾಷ್ಟ್ರಕವಿ ಡಾ: ಕೆ.ವಿ ಪುಟ್ಟಪ್ಪ (ಕುವೆಂಪು) ಏರಪೋರ್ಟ ಹಾಗೂ ಜಗಜ್ಯೋತಿ ಬಸವೇಶ್ವರ ಏರಪೋರ್ಟ ಎಂದು ಮರು ನಾಮಕರಣ ಮಾಡುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರಕಾರದಿಂದ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರ ಅನುಮೋದನೆ ನೀಡುವಂತೆ ನೋಡಿಕೊಳ್ಳುವಂತೆಯೂ ಸಹ ವಿಮಾನಯಾನ ಸಚಿವರಲ್ಲಿ ಕೋರಿದರು.

ಪ್ರಸ್ತಾಪಿತ ವಿಷಯವಾಗಿ ಆದಷ್ಟು ಶೀಘ್ರ ಕ್ರಮ ಕೈಕೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಇವರು ಭರವಸೆಯನ್ನು ನೀಡಿದರು ಎಂದು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.


Share this with Friends

Related Post