Fri. Mar 6th, 2026

ಇನ್ಶುರೆನ್ಸ್ ಪರಿಹಾರ ಪಡೆಯಲು ಅನುಭವಿಸುತ್ತಿದ್ದ ತೊಂದರೆಗಳಿಗೆ ಇ-ಡಾರ್ ಪೋರ್ಟಲ್ ಶಾಶ್ವತ ಪರಿಹಾರ: ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು: ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳು ಇನ್ಶುರೆನ್ಸ್ ಕಂಪನಿಗಳಿಂದ ಪರಿಹಾರ ಪಡೆಯಲು ಅನುಭವಿಸುತ್ತಿದ್ದ ವಿಳಂಬ ಮತ್ತು ತೊಂದರೆಗಳಿಗೆ ಪರಿಹಾರವಾಗಿ ವಿಮಾ ಪರಿಹಾರ ಪ್ರಕ್ರಿಯೆಯನ್ನು ಸರಳಗೊಳಿಸಲು ಇ-ಡಾರ್ ಪೋರ್ಟಲ್ ಅನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ಸಾರಿಗೆ ಇಲಾಖೆ, ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿಂದು ಆಯೋಜಿಸಲಾಗಿದ್ದ ‘ಇ-ಡಾರ್’ (e-DAR) ಅನುಷ್ಠಾನ ಹಾಗೂ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ-2026’ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳು ಇನ್ಶುರೆನ್ಸ್ ಕಂಪನಿಗಳಿಂದ ಪರಿಹಾರ ಪಡೆಯಲು ಅನುಭವಿಸುತ್ತಿದ್ದ ವಿಳಂಬ ಮತ್ತು ತೊಂದರೆಗಳಿಗೆ ಈ ಹೊಸ ಆ್ಯಪ್ ಶಾಶ್ವತ ಪರಿಹಾರ ನೀಡಲಿದೆ ಎಂದರು.

ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಮೊದಲು ಧಾವಿಸುವ ಗೃಹ ಇಲಾಖೆಯ ಪೊಲೀಸ್ ಸಿಬ್ಬಂದಿ ನೀಡುವ ವರದಿ, ಸಾರಿಗೆ ಇಲಾಖೆಯ ಮಾಹಿತಿ ಹಾಗೂ ಆರೋಗ್ಯ ಇಲಾಖೆಯ ಚಿಕಿತ್ಸಾ ವಿವರಗಳನ್ನೆಲ್ಲ ಈ ಡಿಜಿಟಲ್ ವೇದಿಕೆ ಒಗ್ಗೂಡಿಸಲಿದ್ದು, ಇದರಿಂದ ವಿಮಾ ಕಂಪನಿಗಳು ಅತ್ಯಂತ ವೇಗವಾಗಿ ಪರಿಹಾರ ಧನವನ್ನು ವಿತರಿಸಲು ಸಾಧ್ಯವಾಗುತ್ತದೆ ಎಂದರು.

ಸಾಮಾನ್ಯವಾಗಿ ಅಪಘಾತದಲ್ಲಿ ವ್ಯಕ್ತಿಯ ಪ್ರಾಣಹಾನಿಯಾದಾಗ ಆತನನ್ನು ನಂಬಿದ ಕುಟುಂಬಕ್ಕೆ ಉಂಟಾಗುವ ಆರ್ಥಿಕ ನಷ್ಟ ತುಂಬಲಾರದದ್ದು. ಇಂತಹ ಕಷ್ಟದ ಸಮಯದಲ್ಲಿ ಇನ್ಶುರೆನ್ಸ್ ಹಣ ಪಡೆಯುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿರುವುದು ವಿಷಾದನೀಯ.ನೊಂದ ಕುಟುಂಬಗಳು ಮತ್ತಷ್ಟು ಕಷ್ಟಕ್ಕೆ ಸಿಲುಕಬಾರದು ಎಂಬ ಮಾನವೀಯ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ ಎಂದರು.

ಇದರೊಂದಿಗೆ, ಮಹಿಳೆಯರು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ‘ಆಟೋ ಚಾಲಕರ ಡಿಸ್ಪ್ಲೇ ಕಾರ್ಡ್’ಗಳನ್ನು ಬಿಡುಗಡೆ ಮಾಡಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

 


Share this with Friends

Related Post