Fri. Mar 6th, 2026

ನೆಲಮಂಗಲದಲ್ಲಿ ಹೊತ್ತಿ ಉರಿದ ಖಾಸಗಿ ಬಸ್;  ಪ್ರಯಾಣಿಕರು ಪವಾಡಸದೃಶ ಪಾರು

Share this with Friends

ನೆಲಮಂಗಲ: ಶಿವಮೊಗ್ಗ ಸಮೀಪ ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದ ಘಟನೆ ಬೆನ್ನಲ್ಲೇ ಮತ್ತೊಂದು ಅಗ್ನಿ ದರಂತ ಘಟನೆ ನಡೆದಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಖಾಸಗಿ ಬಸ್ವೊಂದು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಇಂದು ಮುಂಜಾನೆ ವಿದ್ಯುತ್ ಕಂಬಕ್ಕ ಡಿಕ್ಕಿ ಹೊಡೆದು ಅಗ್ನಿ ಅವಘಡಕ್ಕೆ ತುತ್ತಾಗಿ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 30- 40 ಪ್ರಯಾಣಿಕರು ಬೆಂಕಿ ಹರಡುವ ಮೊದಲೇ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.

ಶುಕ್ರವಾರ ಮುಂಜಾನೆ ಸುಮಾರು 1:45ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ‘ಸಂಜನಾ ಟ್ರಾವೆಲ್ಸ್’ಗೆ ಸೇರಿದ ಈ ಸ್ಲೀಪರ್ ಕೋಚ್ ಬಸ್ (KA-01-AS-7740), ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಕ್ಷಣಮಾತ್ರದಲ್ಲಿ ಇಡೀ ಬಸ್ಸನ್ನು ಬೆಂಕಿ ಆವರಿಸಿದೆ.

ಬೂದಿಯಾದ ಲಗೇಜ್‌ಗಳು:

ಅಪಘಾತ ಸಂಭವಿಸುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ಕಿಟಕಿ ಹಾಗೂ ಬಾಗಿಲುಗಳ ಮೂಲಕ ಹೊರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಪ್ರಯಾಣಿಕರ ಲಗೇಜ್‌ಗಳು, ಬಟ್ಟೆಬರೆಗಳು ಹಾಗೂ ಬೆಲೆಬಾಳುವ ವಸ್ತುಗಳು ಬಸ್‌ನೊಂದಿಗೆ ಸುಟ್ಟು ಕರಕಲಾಗಿವೆ. ರಸ್ತೆಯಲ್ಲೇ ನಿಂತ ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸ್ಥಳಕ್ಕೆ ಭೇಟಿ:

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಚಾಲಕನ ಅಜಾಗರೂಕತೆ ಅಥವಾ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿನ ಗೊಂದಲ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ


Share this with Friends

Related Post