Fri. Mar 6th, 2026

ಮೆಟ್ರೋ ದರ ಹೆಚ್ಚಳ ನಿರ್ಧಾರ ಮರುಪರಿಶೀಲಿಸಿ: ಕೇಂದ್ರಕ್ಕೆ ಸಿಎಂ ಮನವಿ

Share this with Friends

ಬೆಂಗಳೂರು: ಮೆಟ್ರೋ ಪ್ರಯಟಲಾಣದರ ಹೆಚ್ಚಳದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲದಿದ್ದರೂ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಆದರೂ ಬೆಂಗಳೂರಿನ ಪ್ರಯಾಣಿಕರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕಾಗಿ ಔಪಚಾರಿಕವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಿಎಂ, ಮೆಟ್ರೋ ದರ ಏರಿಕೆಯ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿಲ್ಲ. ಮೆಟ್ರೋ ರೈಲ್ವೆ ಕಾಯ್ದೆಯಡಿ ಕೇಂದ್ರ ಸರ್ಕಾರ ರಚಿಸಿದ ಸ್ವತಂತ್ರ ದರ ನಿರ್ಧರಣಾ ಸಮಿತಿ (FFC) ಈ ದರವನ್ನು ನಿಗದಿಪಡಿಸಿದೆ. ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002 ರ ಸೆಕ್ಷನ್ 36 ಮತ್ತು 37 ರ ಪ್ರಕಾರ, ದರ ನಿರ್ಧರಣಾ ಸಮಿತಿಯ ಶಿಫಾರಸುಗಳು ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರ ಅಥವಾ BMRCL ಇದನ್ನು ಮೀರುವ ಅಧಿಕಾರ ಹೊಂದಿಲ್ಲ ಎಂದು ವಸ್ತುಸ್ಥಿತಿಯನ್ನು ವಿವರಿಸಿದರು.

ಮೆಟ್ರೋ ದರ ಹೆಚ್ಚಳದಿಂದ ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ಮನಗಂಡು, ಈ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಿದ್ದೇನೆ,ದರ ನಿಗದಿ ಕಮಿಟಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು. ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು. ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಕನ್ನಡಿಗರ ಶೋಷಣೆ:

ಕರ್ನಾಟಕದ ಬಿಜೆಪಿ ನಾಯಕರಿಗೆ ತಮಗೆ ಮತ ನೀಡಿದ ಜನರ ಹಿತರಕ್ಷಣೆಗಿಂತ ತಮ್ಮ ಹೈಕಮಾಂಡ್‌ ನಾಯಕರ ಓಲೈಕೆಯೇ ಮುಖ್ಯವಾಗಿದೆ.  ಈ ದರ ಏರಿಕೆ ಯಾವುದೋ ಒಂದು ಪ್ರತ್ಯೇಕ ಘಟನೆಯಲ್ಲ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮೇಲಿಂದ ಮೇಲೆ ಎಸಗುತ್ತಿರುವ ಅನ್ಯಾಯದ ಸರಣಿಯ ಭಾಗವಾಗಿದೆ. ಅಸಮರ್ಪಕ ತೆರಿಗೆ ಹಂಚಿಕೆ, ನ್ಯಾಯಯುತ ಅನುದಾನದ ನಿರಾಕರಣೆ, ಮೂಲಭೂತ ಸೌಲಭ್ಯಗಳಿಗೆ ಬೆಂಬಲ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಈಗ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಮೆಟ್ರೋ ದರಗಳು, ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದ್ದು, ಇವುಗಳ ಉದ್ದೇಶ ಕನ್ನಡಿಗರ ಶೋಷಣೆಯಾಗಿದೆ ಎಂದು ಸಿಎಂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.


Share this with Friends

Related Post