ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆಗಳ ಹಿನ್ನೆಲೆಯಲ್ಲಿ ನಾಳೆ (ಫೆಬ್ರವರಿ 7, 2026) ಚುನಾವಣಾ ಪೂರ್ವ ಸಿದ್ಧತಾ ಸಭೆಯನ್ನು ನಡೆಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಬಿಬಿಎಂಪಿ (ಈಗ GBA) ಚುನಾವಣೆಗೆ ಬಿಜೆಪಿ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ಈ ಸಭೆಯನ್ನು ಆಯೋಜಿಸಲಾಗಿದೆ. ಎಲ್ಲ ಶಾಸಕರು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಜೆಪಿ ಬಿಬಿಎಂಪಿಯಲ್ಲಿ ಗೆದ್ದಿತ್ತು. ಈಗ ನಿರಂತರವಾಗಿ ತೆರಿಗೆಗಳನ್ನು ಹಾಕಿರುವುದರಿಂದ ಕಾಂಗ್ರೆಸ್‌ಗೆ ಜನರು ಕಪಾಳ ಮೋಕ್ಷ ಮಾಡಲಿದ್ದಾರೆ. ಬಿಜೆಪಿ ಐದು ಪಾಲಿಕೆಗಳನ್ನು ಗೆಲ್ಲುವ ಕುರಿತು ತಂತ್ರಗಾರಿಕೆ ಮಾಡಲಿದ್ದೇವೆ ಎಂದರು.
ಬ್ಯಾಲೆಟ್ ಪೇಪರ್ ವಿರೋಧ: ಜಿಬಿಎ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವ ಸರ್ಕಾರದ ನಿರ್ಧಾರವನ್ನು ಅಶೋಕ್ ಅವರು ಕಟುವಾಗಿ ಟೀಕಿಸಿದ್ದು, ಇದು ಕಾಂಗ್ರೆಸ್ ಸರ್ಕಾರದ “ರಾಜಕೀಯ ದಿವಾಳಿತನ” ಮತ್ತು ಸೋಲಿನ ಭಯವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ನವರು ತುಘಲಕ್‌ನಂತೆ ಎಡಬಿಡಂಗಿಗಳು, ಮತಯಂತ್ರವನ್ನು ರಾಜೀವ್ ಗಾಂಧಿ ತಂದಿದ್ದು, ಈಗ ಅವರ ಮೇಲೆಯೇ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ. ಮತಯಂತ್ರವನ್ನು ಕೋರ್ಟ್ ಕೂಡ ಮಾನ್ಯ ಮಾಡಿದೆ. ನಾಯಕತ್ವ ಇಲ್ಲದೇ ಆಗುತ್ತಿರುವ ಸೋಲಿನಿಂದ ಪಾಠ ಕಲಿಯುವ ಬದಲು ಮತಯಂತ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರು ಒಂದು ವ್ಯವಸ್ಥೆಗೆ ಹೊಂದಿಕೊಂಡಿರುವಾಗ ಈಗ ಮತ್ತೆ ಬದಲಾವಣೆ ಮಾಡಲು ಮುಂದಾದರೆ ಕಷ್ಟವಾಗುತ್ತದೆ. ಎಲ್ಲ ಉನ್ನತ ಹುದ್ದೆಗಳನ್ನು ಸೋನಿಯಾ ಗಾಂಧಿ ಕುಟುಂಬಕ್ಕೆ ಕೊಡಲಾಗಿದೆ. ಕಾಂಗ್ರೆಸ್‌ನಲ್ಲಿ ಒಂದು ಕುಟುಂಬಕ್ಕೆ ಅಂಟಿಕೊಳ್ಳುವ ಬದಲು ಹೊಸಬರಿಗೆ ಅವಕಾಶ ನೀಡಬೇಕು. ಒಂದು ಕುಟುಂಬದಿಂದ ಇಡೀ ಪಕ್ಷ ಹಾಳಾಗಿದೆ ಎಂದು ಟೀಕಿಸಿದರು.
ನಾಳಿನ ಸಭೆಯ ಪ್ರಮುಖ ವಿಷಯಗಳು: ಸಭೆಯಲ್ಲಿ ಕ್ಷೇತ್ರವಾರು ಚುನಾವಣಾ ತಂತ್ರಗಳು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು (ರಸ್ತೆ ಗುಂಡಿ, ಕಸದ ಸಮಸ್ಯೆ ಇತ್ಯಾದಿ) ಜನರ ಮುಂದೆ ಕೊಂಡೊಯ್ಯುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
ಗಡುವು: ಸುಪ್ರೀಂ ಕೋರ್ಟ್ ಸೂಚನೆಯಂತೆ ಜೂನ್ 30, 2026 ರೊಳಗೆ ಜಿಬಿಎ ಚುನಾವಣೆಗಳನ್ನು ಮುಕ್ತಾಯಗೊಳಿಸಬೇಕಿದ್ದು, ರಾಜ್ಯ ಚುನಾವಣಾ ಆಯೋಗವು ಮೇ 25ರ ನಂತರ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.

