ಬೆಂಗಳೂರು: ಸಿನಿಮಾ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದ 17ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (BIFFES) ಶುಕ್ರವಾರ ರಾತ್ರಿ ನಗರದ ಲುಲು ಮಾಲ್‌ನಲ್ಲಿ ಅದ್ಧೂರಿ ತೆರೆ ಬಿದ್ದಿದೆ.
ಈ ಸಮಾರೋಪ ಸಮಾರಂಭದಲ್ಲಿ ಚಿತ್ರರಂಗದ ದಿಗ್ಗಜರು ಹಾಗೂ ಗಣ್ಯರ ಸಮ್ಮುಖದಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರಿಗೆ ‘ಜೀವಮಾನದ ಶ್ರೇಷ್ಠ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜಪಾನ್ ದೇಶದದ ʼಲಾಸ್ಟ್ ಲ್ಯಾಂಡ್ʼ, ಮರಾಠಿಯ ʼಸಬರ್ ಬೊಂಡಾʼ ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಂಸಲೇಖ ಅವರು, “ಕಲೆಗೆ ಸಮಾರೋಪ ಇರುವುದಿಲ್ಲ, ಅದು ನಿರಂತರ ಸೃಷ್ಟಿಯ ಆರಂಭ. ಸಿನಿಮಾ ಎನ್ನುವುದು ಸಾಮೂಹಿಕ ಕೃಷಿ. ಕನ್ನಡ ನಾಡಿನ ವೈಚಾರಿಕತೆ ನನ್ನನ್ನು ಬೆಳೆಸಿದೆ. ಬೇಂದ್ರೆಯವರು ‘ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ…’ ಎಂದು ಹಾಡಿದ್ದರೆ, ಇಂದು ‘ಕಾಂತಾರ’ ಮತ್ತು ‘ಕೆಜಿಎಫ್’ ಚಿತ್ರಗಳು ಕನ್ನಡದ ಕೀರ್ತಿಯನ್ನು ದಕ್ಷಿಣದಿಂದ ಉತ್ತರಕ್ಕೆ ಕೊಂಡೊಯ್ದಿವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವಂತಹ ಸಿನಿಮಾಗಳು ಇಂದು ಬರಬೇಕಿದೆ,” ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, “ಕಲೆಯಲ್ಲಿ ಭಯ ಇರಬಾರದು, ಬದಲಿಗೆ ಮುಕ್ತ ಅಭಿವ್ಯಕ್ತಿ ಇರಬೇಕು. ಪ್ರಶ್ನೆ ಮಾಡುವ ಅವಕಾಶವೇ ಪ್ರಜಾಪ್ರಭುತ್ವ. ಯಾರ ಹಂಗೂ ಇಲ್ಲದೆ ಧೈರ್ಯದಿಂದ ಸಿನಿಮಾ ಮಾಡುವ ವಾತಾವರಣ ಕನ್ನಡದಲ್ಲಿ ನಿರ್ಮಾಣವಾಗಬೇಕು,” ಎಂದರು. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮಾತನಾಡಿ, ಸಿನಿಮಾವು ಮಾನವೀಯ ಸಂಸ್ಕೃತಿ ಮತ್ತು ನೋವುಗಳನ್ನು ದಾಖಲಿಸುವ ಹೊಸ ಭಾಷೆಯಾಗಿದೆ ಎಂದು ಬಣ್ಣಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ ಅವರು ಈ ಬಾರಿಯ ಯಶಸ್ಸಿನ ಕುರಿತು ಮಾಹಿತಿ ಹಂಚಿಕೊಂಡರು. “ಇದು ಭಾರತದ ಅತೀ ದೊಡ್ಡ ಚಿತ್ರೋತ್ಸವಗಳಲ್ಲಿ ಒಂದಾಗಿದೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿರುವುದು ವಿಶೇಷ. 92 ವರ್ಷಗಳ ಚಿತ್ರ ಇತಿಹಾಸದ ಛಾಯಾಚಿತ್ರ ಪ್ರದರ್ಶನ ಮತ್ತು ಟೆಂಟ್ ಸಿನಿಮಾಗಳು ಜನರ ಮೆಚ್ಚುಗೆ ಗಳಿಸಿವೆ,” ಎಂದು ತಿಳಿಸಿದರು.
ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮಾತನಾಡಿ, ʼಭಾಷೆ ಹಲವಾದರೂ, ಭಾವನೆ ಒಂದೇ. ಬೇರೆಬೇರೆ ವ್ಯಾಕರಣ ಇದ್ದರೂ, ಅದರ ಗರ್ಭದಲ್ಲಿ ಗ್ರಹಿಕೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆ. ಅದು ಅವನ ಸಂಸ್ಕೃತಿ, ನೋವು, ಅಳಲು ದಾಖಲಿಸುತ್ತದೆ. ಚಿತ್ರೋತ್ಸವವೆನ್ನುವುದು ಪ್ರಪಂಚದ ಬೇರೆಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ. ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ ನಿಟ್ಟಿನಲ್ಲಿ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿದೆʼ ಎಂದರು.

