ಬೆಂಗಳೂರು,ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ಹಂತದ ಸಂಪರ್ಕವನ್ನು (Last-mile connectivity) ಸುಲಭಗೊಳಿಸಲು ಬಿಎಂಆರ್ಸಿಎಲ್ (BMRCL) ಮತ್ತು ಬಿಎಂಟಿಸಿ (BMTC) ಜಂಟಿ ಕಾರ್ಯಾಚರಣೆ ಆರಂಭಿಸಿವೆ.
ಮೆಟ್ರೋ ನಿಲ್ದಾಣದಿಂದ ಇಳಿದ ಕೂಡಲೇ ಬಸ್ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ನಗರದ ಆಯ್ದ 10 ಆಯಕಟ್ಟಿನ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರಗಳಲ್ಲೇ ಹೊಸದಾಗಿ ಬಸ್ ನಿಲ್ದಾಣಗಳನ್ನು ಹಾಗೂ ಬಸ್ ಬೇಗಳನ್ನು (Bus Bays) ನಿರ್ಮಿಸಲಾಗಿದೆ.
ಸ್ಥಳಾಂತರ ಮತ್ತು ಹೊಸ ನಿಲ್ದಾಣ: ಈ ಹಿಂದೆ ಮೆಟ್ರೋ ನಿಲ್ದಾಣದಿಂದ ದೂರದಲ್ಲಿದ್ದ ಬಿಎಂಟಿಸಿ ನಿಲ್ದಾಣಗಳನ್ನು ಈಗ ಮೆಟ್ರೋ ನಿಲ್ದಾಣದ ಕೇವಲ 50 ರಿಂದ 100 ಮೀಟರ್ ಅಂತರಕ್ಕೆ ತರಲಾಗಿದೆ.
ಹೊಸ ಬಸ್ ನಿಲ್ದಾಣಗಳ ವಿವರ: ಪ್ರಮುಖವಾಗಿ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದ್ದು, ಮಂಜುನಾಥನಗರ, ಪೀಣ್ಯ, ಲಾಲ್ಬಾಗ್, ಸೌತ್ ಎಂಡ್ ಸರ್ಕಲ್, ಜೆ.ಪಿ ನಗರ, ಕೊನನಕುಂಟೆ ಕ್ರಾಸ್, ವಾಜರಹಳ್ಳಿ ಮತ್ತು ತಲಘಟ್ಟಪುರ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಹೊಸ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.
ಏರ್ಪೋರ್ಟ್ ಬಸ್ ಸೌಲಭ್ಯ: ಇಂದಿನಿಂದ (ಫೆಬ್ರವರಿ 7) ಜಾರಿಗೆ ಬರುವಂತೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯು ವಜ್ರ ಬಸ್ಗಳು ಮಾರ್ಗಮಧ್ಯದಲ್ಲಿ ಸಿಗುವ ಎಲ್ಲಾ ಮೆಟ್ರೋ ನಿಲ್ದಾಣಗಳ ಬಳಿ ನಿಲುಗಡೆ ನೀಡಲಿವೆ. ಇದು ಲಗೇಜ್ ಹೊಂದಿರುವ ಪ್ರಯಾಣಿಕರಿಗೆ ವರದಾನವಾಗಲಿದೆ.
ಹಳದಿ ಮಾರ್ಗದ ಸಿದ್ಧತೆ: ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿರುವ ಹಳದಿ ಮಾರ್ಗದಲ್ಲಿಯೂ (ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ) ಸದ್ಯ ಸಿಲ್ಕ್ ಬೋರ್ಡ್ ಮತ್ತು ಹೆಸರಘಟ್ಟದಂತಹ ಪ್ರಮುಖ ನಿಲ್ದಾಣಗಳ ಬಳಿ ಇದೇ ರೀತಿಯ ಸಮನ್ವಯ ವ್ಯವಸ್ಥೆ ಕಲ್ಪಿಸಲಾಗಿದೆ.
“ಮೆಟ್ರೋ ಮತ್ತು ಬಸ್ ನಡುವೆ ಸಲೀಸಾದ ಬದಲಾವಣೆ (Interchange) ಸಾಧ್ಯವಾದರೆ ಮಾತ್ರ ಸಾರ್ವಜನಿಕರು ಖಾಸಗಿ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಸಾಧ್ಯ. ಈ ನಿಟ್ಟಿನಲ್ಲಿ ಎರಡು ಸಂಸ್ಥೆಗಳು ಜಂಟಿ ಸರ್ವೆ ನಡೆಸಿ ಈ ಕ್ರಮ ಕೈಗೊಂಡಿವೆ” ಎಂದು ಬಿಎಂಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಈ ಸುಧಾರಿತ ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಎಂಆರ್ಸಿಎಲ್ ಮತ್ತು ಬಿಎಂಟಿಸಿ ಮನವಿ ಮಾಡಿವೆ

