Fri. Mar 6th, 2026

ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ: ಜನವರಿ ತಿಂಗಳಲ್ಲೇ ₹7.05 ಲಕ್ಷ ದಂಡ ವಸೂಲಿ

Share this with Friends

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುವವರ ವಿರುದ್ಧ ಸಂಸ್ಥೆಯ ತನಿಖಾ ತಂಡಗಳು ಸಮರ ಸಾರಿವೆ. 2026ರ ಜನವರಿ ತಿಂಗಳೊಂದರಲ್ಲೇ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ ತಂಡಗಳು, ಒಟ್ಟು 2,879 ಪ್ರಯಾಣಿಕರಿಂದ 7,05,630 ರೂಪಾಯಿ ದಂಡ ವಸೂಲಿ ಮಾಡಿವೆ.

ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜನವರಿ ಮಾಹೆಯಲ್ಲಿ ಒಟ್ಟು 18,466 ಟ್ರಿಪ್‌ಗಳನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ 2,637 ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದು, ಅವರಿಂದ 5,85,650 ರೂಪಾಯಿ ದಂಡ ಪಡೆಯಲಾಗಿದೆ. ನಿರ್ಲಕ್ಷ್ಯ ವಹಿಸಿದ 1,679 ನಿರ್ವಾಹಕರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಿಎಂಟಿಸಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಹಿಳಾ ಆಸನದಲ್ಲಿ ಕುಳಿತ ಪುರುಷರಿಗೆ ಬರೆ:

ಮಹಿಳೆಯರಿಗಾಗಿ ಮೀಸಲಿಟ್ಟ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 242 ಪುರುಷ ಪ್ರಯಾಣಿಕರಿಗೆ ಮೋಟಾರು ವಾಹನ ಕಾಯ್ದೆ 1988ರ ಅನ್ವಯ ಒಟ್ಟು 24,200 ರೂಪಾಯಿ ದಂಡ ವಿಧಿಸಲಾಗಿದೆ. ಸಾರಿಗೆ ನಿಯಮಗಳ ಉಲ್ಲಂಘನೆ ತಡೆಗೆ ತನಿಖಾ ತಂಡಗಳು 55 ಬಸ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದು, ಇದರಲ್ಲಿ 63 ಕೆಂಪು ಚುಕ್ಕೆ ಹಾಗೂ 24 ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರಿಗೆ ಮನವಿ:

ಪ್ರಯಾಣಿಕರು ಕಡ್ಡಾಯವಾಗಿ ಅಧಿಕೃತ ಟಿಕೆಟ್ ಅಥವಾ ಪಾಸ್‌ಗಳನ್ನು (ದಿನದ, ವಾರದ ಅಥವಾ ಮಾಸಿಕ) ಪಡೆದೇ ಪ್ರಯಾಣಿಸಬೇಕು. ಮಹಿಳೆಯರಿಗಾಗಿ ಮೀಸಲಾದ ಆಸನಗಳನ್ನು ಅವರಿಗೆ ಬಿಟ್ಟುಕೊಡುವ ಮೂಲಕ ಸಹಕರಿಸಬೇಕು. ಈ ಮೂಲಕ ಅನಗತ್ಯ ದಂಡದಿಂದ ಬಚಾವಾಗಬಹುದು ಹಾಗೂ ಸಂಸ್ಥೆಯು ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಬಿಎಂಟಿಸಿ ಕೇಂದ್ರ ಕಚೇರಿಯ ತನಿಖಾ ದಳ ಕೋರಿದೆ.


Share this with Friends

Related Post