ಬೆಂಗಳೂರು: ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿಯ ಪ್ರಸಾರವನ್ನು ತಡೆಯಲು ಬಲವಾದ ಮತ್ತು ಜವಾಬ್ದಾರಿಯುತ ಎಐ (AI) ಚೌಕಟ್ಟುಗಳ ಅಗತ್ಯವಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದಲ್ಲಿ ನಡೆದ IndiaAIImpactSummit2026 ಸಮಾವೇಶದಲ್ಲಿ ಮೆಟಾ (Meta) ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಅವರು, “ಪ್ಲಾಟ್ಫಾರ್ಮ್ಗಳ ಸಮಗ್ರತೆಯನ್ನು ಕಾಪಾಡುವಲ್ಲಿ ಮೆಟಾದಂತಹ ಕಂಪನಿಗಳ ಪಾತ್ರ ನಿರ್ಣಾಯಕ. ತಪ್ಪು ಮಾಹಿತಿಯನ್ನು ನಿಯಂತ್ರಿಸಲು ಅವರು ಕೈಗೊಳ್ಳುತ್ತಿರುವ ಸಕ್ರಿಯ ಕ್ರಮಗಳು ಶ್ಲಾಘನೀಯ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಜಾರ್ವಿಸ್ ಅನುಭವ ನೀಡಿದ ಸ್ಮಾರ್ಟ್ ಗ್ಲಾಸ್:
ಇದೇ ಸಂದರ್ಭದಲ್ಲಿ ಮೆಟಾ ಪೆವಿಲಿಯನ್ನಲ್ಲಿ ಪ್ರದರ್ಶಿಸಲಾದ ಹೊಸ ರೇ-ಬ್ಯಾನ್ ಡಿಸ್ಪ್ಲೇ AI ಕನ್ನಡಕಗಳನ್ನು ಸಚಿವರು ಪರೀಕ್ಷಿಸಿದರು. EMG ಆಧಾರಿತ ನ್ಯೂರಲ್ ರಿಸ್ಟ್ ಬ್ಯಾಂಡ್ ಮೂಲಕ ಕೇವಲ ಬೆರಳಿನ ಚಲನೆಗಳಿಂದ ಇನ್-ಲೆನ್ಸ್ ಡಿಸ್ಪ್ಲೇಯನ್ನು ನಿಯಂತ್ರಿಸುವ ತಂತ್ರಜ್ಞಾನವು ಅವರಿಗೆ ‘ಐರನ್ ಮ್ಯಾನ್’ ಚಿತ್ರದ ಜಾರ್ವಿಸ್ ತಂತ್ರಜ್ಞಾನದ ಅನುಭವ ನೀಡಿತು.”ಫೋನ್ ಅಥವಾ ಪರದೆಯ ಅಗತ್ಯವಿಲ್ಲದೆ ನೈಸರ್ಗಿಕವಾಗಿ ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ಭವಿಷ್ಯವು ಈಗ ನಿಜವಾಗುತ್ತಿದೆ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

